ದೇವಾಲಯ
ಪೂಜೆಗಾಗಿ, ಪ್ರಾರ್ಥನೆಗಾಗಿ, ದೇವರ ಮೂರ್ತಿಗಳನ್ನು ಇತರ ಆರಾಧ್ಯ ವಸ್ತುಗಳನ್ನು ಸ್ಥಾಪಿಸಿ ರಕ್ಷಿಸಲಿಕ್ಕಾಗಿ ನಿರ್ಮಿಸಿರುವ ವಿಶಿಷ್ಟವಾದ ಕಟ್ಟಡ. ಗುಡಿಗಳು, ದೇವಾಲಯಗಳ ಮಾದರಿಯಲ್ಲಿ ಕಟ್ಟಿರುವ ಇತರ ಕಟ್ಟಡಗಳು ಯಹ್ಯೂದರ ಆರಾಧನಾಮಂದಿರ ಕ್ರಿಶ್ಚಿಯನರ ಪ್ರಾರ್ಥನಾ ಮಂದಿರ. ಧಾರ್ಮಿಕ ಕೂಟಗಳು ಸೇರುವ ಕಟ್ಟಡಗಳು. ಬೌದ್ಧ ಸ್ತೂಪಗಳು, ಬಿಹಾರಗಳು, ಜೈನ ಬಸದಿಗಳು- ಮುಂತಾದವೂ ಈ ಗುಂಪಿಗೆ ಸೇರುತ್ತವೆ.

ಅತ್ಯಂತ ಪುರಾತನವಾದ ದೇವಾಲಯಗಳೆಂದರೆ ಮೆಡಿಟೇರಿಯನ್ ಪ್ರದೇಶದ ಕೆಲವು ಗುಹಾದೇವಾಲಯಗಳು. ಅವುಗಳಲ್ಲಿಯೂ ಮಾಲ್ಟ ದ್ವೀಪದಲ್ಲಿರುವ ಇಂಥ ದೇವಾಲಯಗಳು ಗಮನಾರ್ಹವಾದವು. ಅವು ಆರಂಭದಲ್ಲಿ ನವಶಿಲಾಯುಗದ ಕಾಲಕ್ಕೆ ಸೇರಿದ್ದು ಸಾವಿರಾರು ವರ್ಷಗಳವರೆಗೂ ಬಳಕೆಯಲ್ಲಿ ಮುಂದುವರಿದಂತೆ ತೋರುತ್ತದೆ. ಕ್ರಿ.ಪೂ. ಸುಮಾರು 5000 ವರ್ಷಗಳಷ್ಟು ಪುರಾತನವಾದುವಾದರೂ ವೇದಿಕೆಯ ಶಿಲೆಗಳು ದ್ವಾರಗಳು ಮುಂತಾದವನ್ನು ಅಲಂಕರಿಸುವಲ್ಲಿ ಆಗಿನ ಜನ ತೋರಿಸಿರುವ ಶ್ರದ್ಧೆ ಆಶ್ಚರ್ಯಕರವಾದದು. ಸ್ಥೂಲವಾದ ಸ್ತ್ರೀ ಮೂರ್ತಿಗಳು ಅವುಗಳೊಂದಿಗೆ ಪ್ರಮುಖ ಸ್ಥಾನಗಳಲ್ಲಿರುವ ಬೃಹದ್ಗಾತ್ರದ ಲಿಂಗದ ಕಲ್ಲುಗಳು ಬಹುಶಃ ಆ ದೇವಾಲಯಗಳು ಫಲಶಕ್ತಿದೇವತೆಗಳ ಪೂಜೆಗಾಗಿ ಮೀಸಲಾಗಿದ್ದವೆಂಬುದನ್ನು ಸೂಚಿಸುತ್ತವೆ. ಹಗರ್‍ಕೀಮ್, ಹಾಲ್‍ಟಕ್ರ್ಸಿಯನ್ ನೈದ್ರ ಮೊದಲಾದೆಡೆಗಳಲ್ಲಿ ಪ್ರಮುಖವಾದ ಇಂಥ ದೇವಾಲಯಗಳಿವೆ. ಹಾಲ್ ಸಪ್ಲಿಯಸ್ ಎಂಬಲ್ಲಿರುವ ನವಶಿಲಾಯುಗದ ಕಾಲದ ಗುಹೆಗಳ ಸಾಲು ಬಹುಶಃ ಪೂಜೆಗೂ ವಾಸಕ್ಕೂ ಉಪಯೋಗಿಸಲ್ಪಡುತ್ತಿದ್ದವು. ಅಲ್ಲಿ ದೊರೆತಿರುವ ಮಾನವ ಮೂಳೆಗಳ ರಾಶಿಯನ್ನು ನೋಡಿದರೆ ಆ ಗುಹೆಗಳನ್ನು ಹೆಣಮಾಳಿಗೆಗಳಾನ್ನಾಗಿಯೂ ಉಪಯೋಗಿಸುತ್ತಿದ್ದಿರಬೇಕೆನಿಸುತ್ತದೆ. ಮುಂದೆ ಅವುಗಳಿಗಿಂತ ಬಹು ಈಚಿನ ಕಾಲದಲ್ಲಿ ಈಜಿಪ್ಟನಲ್ಲಿ ನಿರ್ಮಿಸಿರುವ ಅಬು ಸಿಂಬೆಲ್‍ನ ಗುಹಾದೇವಾಲಯಗಳಲ್ಲಿ ಇಂಥ ಪುರಾತನ ದೇವಾಲಯಗಳು ಹೆಚ್ಚು ವಿಕಾಸ ಹೊಂದಿ ಬೆಳೆದಿರುವದನ್ನು ನೋಡಬಹುದು. ಭಾರತದಲ್ಲಿನ ಗುಂಪುಗುಂಪಾಗಿರುವ ಗುಹಾದೇವಾಲಯಗಳನ್ನೂ ಚೀನಾದ ಯಾಂಗ್‍ಟ್ಸಿ ನದಿಯ ದಡದ ಮೇಲಿನ ಪುರಾತನ ಗುಹಾದೇವಾಲಯಗಳನ್ನು ನೋಡಿದಲ್ಲಿ ಹೀಗೆ ದೇವಾಲಯಗಳಿಗಾಗಿ ಗುಹೆಗಳನ್ನು ತೋಡುವ ಪದ್ಧತಿ ವ್ಯಾಪಕವಾಗಿ ಹರಡಿತ್ತೆಂಬುದು ವ್ಯಕ್ತವಾಗುತ್ತದೆ.

ಗುಹೆಗಳಂತೆಯೇ ಬೆಟ್ಟಗಳ ಮೇಲೆ ದೇವಾಲಯಗಳನ್ನು ಕಟ್ಟುವುದೂ ಪ್ರಾಚೀನ (ಈ ಕಾಲದಿಂದ ನಡೆದು ಬಂದಿರುವ ಪದ್ಧತಿಯೇ ಮತ್ತು ದೇವಾಲಯಗಳು ಹಲವು ಕಡೆ ಮೇಲೆ ಹೋಗುತ್ತ ಕಿರಿದಾಗುವಂತಿದ್ದು ಬೆಟ್ಟದ ಆಕಾರವನ್ನು ತಾಳುವಂತೆ ಇರುವುದನ್ನು ಅಸ್ಸೀರಿಯಾದ ಜಿóಗ್ಗುರ್ಯಾಚ್‍ಗಳಲ್ಲಿ ಪೀಕಿಂಗಿನ ಸ್ವರ್ಗದ ದೇವಾಲಯದಲ್ಲಿ ಮೆಕ್ಸಿಕೊ ಮಧ್ಯ ಅಮೆರಿಕಗಳ ಪಿರಾಮಿಡ್ಡುಗಳಲ್ಲಿ ಕಾಣಬಹುದು.

ಈಜಿಪ್ಟಿನ ಸಂಸ್ಕøತಿ ಬೆಳದಂತೆ ಕಲ್ಲಿನಿಂದ ದೇವಾಲಯಗಳನ್ನು ನಿರ್ಮಿಸುವ ಪದ್ಧತಿ ಬೆಳೆದು ಬಂತು. ಅಲ್ಲಿ ಗುಹಾದೇವಾಲಯಗಳು ಅಪರೂಪ. ಅಲ್ಲಿನ ಅತ್ಯಂತ ಪ್ರಾಚೀನವಾದ ದೇವಾಲಯಗಳೆಂದರೆ ಸರಳವಾದ, ಚೌಕ ಅಥವಾ ದೀರ್ಘ ಚತುರಸ್ರಾಕಾರದ, ಬಾಗಿಲನ್ನುಳಿದು ಬೇರೆ ಕಿಂಡಿಗಳೇ ಇಲ್ಲದ ಕಿರುಗುಡಿಗಳು. ಅಪರೂಪವಾಗಿ ಚಪಟೆಯಾದ ಕಲ್ಲಿನ ಚಾವಣಿಗೆ ಆಧಾರವಾಗಿ ನಾಲ್ಕು ಕಂಬಗಳಿರುವುದುಂಟು. ಪೂಜಾವಿಧಾನದಲ್ಲಿ ವೈವಿಧ್ಯ ಬೆಳೆದಂತೆ, ದೇವಾಲಯಗಳಿಗೆ ಸಂಪತ್ತು ಸೇರಿದಂತೆ, ಅವುಗಳ ಗಾತ್ರ ಹಿಗ್ಗುತ್ತ ಹೋಯಿತು; ಹಲವು ಭಾಗಗಳು ಹೊಸದಾಗಿ ಸೇರುತ್ತ ಹೋಗಿ ಸಂಕೀರ್ಣ ವಿನ್ಯಾಸಗಳನ್ನು ಪಡೆದವು. ಕಾಲಾನುಕ್ರಮದಲ್ಲಿ ಮೂಲ ದೇವಾಲಯದ ಸುತ್ತಲೂ ಮುಂದುಗಡೆಯೂ ಹಲವು ಅಂಗಣಗಳು ಅನಂತರ ಅದ್ಭುತವಾದ ಸಾಲು ಕಂಬಗಳ ಮಂಟಪಗಳು ನಿರ್ಮಾಣಗೊಂಡು ಕೊನೆಗೆ ವಿಶಾಲವಾದ ಅಂಗಳ, ಅದನ್ನು ಬಳಸಿದ ಪ್ರಾಕಾರ ಮುಂದೆ ಬೃಹದಾಕಾರದ ಪೈಲಾನ್ ಅಥವಾ ಹೆಬ್ಬಾಗಿಲುಗಳು ಸೇರಿದವು. ಮೂಲಗುಡಿ ಕಿರಿದೂ ತಗ್ಗಾದದೂ ಆಗಿದ್ದು ಮುಂದೆ ಬಂದಂತೆ ಕಟ್ಟಡಗಳು ವಿಶಾಲವೂ ಬೃಹದ್ಗಾತ್ರವೂ ಆಗುತ್ತ ಕೊನೆಯಲ್ಲಿ ಅತ್ಯಂತ ದೊಡ್ಡವಾದ ಮಹಾದ್ವಾರಗಳನ್ನು ಹೊಂದಿರುವುದು ಈ ದೇವಾಲಯಗಳ ಮುಖ್ಯ ಲಕ್ಷಣವಾಯಿತು. ಅತ್ಯದ್ಭುತವಾದ ಮಹಾದ್ವಾರವನ್ನು ಪ್ರವೇಶಿಸಿ ಮುಂದೆ ಹೋಗುತ್ತ ಹೋಗುತ್ತಾ ಕಿರಿದೂ ತಗ್ಗಾದುದೂ ಆಗುವ ಒಳಗೆ ಕತ್ತಲಾವರಿಸುತ್ತ ಬರುವ ಈ ದೇವಾಲಯಗಳ ರಚನೆಯಲ್ಲಿ ಆಗುವ ಭಯಭಕ್ತಿ ಪ್ರಚೋದನೆ ಹೆಚ್ಚು ಪರಿಣಾಮಕಾರಿಯಾದುದಾಗಿದೆ. ಹಲವು ತಲೆಮಾರುಗಳ ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಭಾಗಗಳನ್ನು ಸೇರಿಸುತ್ತ ಬಂದ ತೀಬ್ಸಿನ ಬೃಹದ್ದೇವಾಲಯಗಳಲ್ಲಿ ಈ ಸರಳ ರಚನೆಯ ಗುಡಿಗಳ ಸುತ್ತಲೂ ಯಾವ ವ್ಯವಸ್ಥೆಯೂ ಇಲ್ಲದೆ ಕಟ್ಟಿರುವ ಹಲವು ಕಿರುಕೊಠಡಿಗಳು, ಅಂಗಳಗಳು, ಮೊಗಸಾಲೆಗಳು ತುಂಬಿಹೋಗಿದ್ದು ಅವುಗಳ ಉದ್ದೇಶವೇನೆಂಬುದು ತಿಳಿದು ಬರುವುದಿಲ್ಲ. ಈಜಿಪ್ಟಿನ ದೇವಾಲಯಗಳ ಎಲ್ಲ ಲಕ್ಷಣಗಳನ್ನೂ ಸ್ಪಷ್ಟವಾಗಿ ಉಳಿಸಿಕೊಂಡು ಬಂದಿರುವ ದೇವಾಲಯವೆಂದರೆ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಎಡ್ಫುನಲ್ಲಿ ಕಟ್ಟಿದ ದೇವಾಲಯ.

ಅಸ್ಸೀರಿಯನ್ ಮತ್ತು ಕ್ಯಾಲ್ಡೀಯನ್ ದೇವಾಲಯಗಳು ಹಲವು ಸ್ತರಗಳಲ್ಲಿ ಮೇಲೇರುವ ಪಿರಮಿಡ್ಡಿನಾಕೃತಿಯ ಜಿûಗ್ಯುರಾತ್‍ಗಳು. ಸ್ತರಗಳ ಮೂಲಕ ತುದಿಯವರೆಗೂ ಮೇಲೇರಲು ಮೆಟ್ಟಿಲುಗಳೋ ಇಳಿಜಾರು ದಾರಿಯೋ ಇದ್ದು ಗೋಡೆಗಳನ್ನು ಹೊಳಪಿನ ಇಟ್ಟಿಗೆಗಳಿಂದಲೋ ಚಿತ್ರಿತ ಮೃಣ್ಮೂರ್ತಿಗಳಿಂದಲೋ ಅಲಂಕರಿಸಲಾಗಿತ್ತು. ಅವುಗಳಲ್ಲಿ ಕೆಲವು ದೇವಾಲಯಗಳಲ್ಲಾದರೂ ಒಂದೊಂದು ವೇದಿಕೆಯನ್ನು ಒಬ್ಬೊಬ್ಬ ದೇವತೆಗೆ ಮೀಸಲಿರಿಸಿತ್ತು. ಹೀಗೆ ಬ್ಯಾಬಿಲಾನಿನ ದೇವಾಲಯದ ಏಳು ವೇದಿಕೆಗಳು ಏಳು ಗ್ರಹಗಳಿಗೆ ಮೀಸಲು. ಈ ಜಿóಗ್ಗುರ್ಯಾಚ್‍ಗಳ ಜೊತೆಗೆ ದೇವಾಲಯ ಅಂಗಳಗಳಿಂದಲೂ ಪುರೋಹಿತರಿಗೆ, ದೇವಾಲಯಯ ಖಜಾನೆಗೆ, ದಾಖಲೆಗಳ ಭದ್ರತೆಗೆ ಕಟ್ಟಿರುವ ಹಲವಾರು ಕೊಠಡಿಗಳಿಂದಲೂ ಕೂಡಿದ್ದಿತು. ಮೆಡಿಟರೇನಿಯನ್ ತೀರದಲ್ಲಿ ಫಿನಿಷನ್ ಮಾದರಿಯ ದೇವಾಲಯಗಳಿದ್ದು ಅವುಗಳಲ್ಲಿ ಚಿಕ್ಕದಾದ ಗರ್ಭಗೃಹ, ಮುಂದೆ ಬೃಹದ್ಗಾತ್ರದ ಪ್ರವೇಶದ್ವಾರ, ಅದರ ಹೊರಭಾಗದಲ್ಲಿ ಇಕ್ಕೆಲುಗಳಲ್ಲಿಯೂ ಬಿಡಿಯಾಗಿ ನಿಂತಿರುವ ಕಂಬಗಳು ಇರುತ್ತವೆ. ಹಲವು ಬದಲಾವಣೆಗಳಿಗೊಳಗಾಗಿದ್ದರೂ ಇವುಗಳ ಮೂಲಸ್ವರೂಪ ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ವಿಶಾಲವಾದ ಅಂಗಳ. ಅದರಲ್ಲಿ ಸಖ್ರ ಎಂದು ಕರೆಯಲಾದ ಪವಿತ್ರ ಶಿಲೆಯ ಮೇಲಿನ ಬೃಹದ್ ಬಲಿಪೀಠ ಮತ್ತು ದೇವಾಲಯದ ಮೂಲಕಟ್ಟಡ. ಇದಕ್ಕೆ ಪ್ರವೇಶ ಈಜಿಪ್ಟಿನ ಪೈಲಾನುಗಳಂತಿರುವ ಬೃಹದಾಕಾರದ ಮಹಾದ್ವಾರದ ಮೂಲಕ. ಈ ಮಹಾದ್ವಾರದ ಎದುರಿಗೋ ಅಕ್ಕಪಕ್ಕಗಳಲ್ಲಿಯೋ ಬೇರೆಯಾಗಿ ನಿಂತಿರುವ ಎರಡು ಭಾರಿ ಸ್ತಂಭಗಳು. ಮಹಾದ್ವಾರವನ್ನು ಪ್ರವೇಶಿಸುತ್ತಿದ್ದಂತೆಯೇ 40 ಮೊಳ ಉದ್ದ 20 ಮೊಳ ಅಗಲ ಮತ್ತು 30ಮೊಳ ಎತ್ತರದ ಹೇಕಾಲ್ ಅಥವಾ ಪವಿತ್ರ ಸ್ಥಳ ಇರುತ್ತದೆ. ಹೇಕಾಲಿಗೆ ಬೆಳಕು ಬರಲು ಗೋಡೆಗಳ ಮೇಲ್ಭಾಗದಲ್ಲಿ ಎರಡೂ ಕಡೆಯೂ ಜಾಲಂಧ್ರಗಳು. ಅಲ್ಲಿಂದ ಒಳಗೆ 20 ಮೊಳ ಚೌರನಾದ ಪವಿತ್ರತಮವಾದ ದೇಬಿರ್ ಉಂಟು. ಇದು ಗರ್ಭಗುಡಿ. ಇದರಲ್ಲಿ ಯೆಹೂದ್ಯರ ಧರ್ಮಶಾಸ್ತ್ರ ಪತ್ರಗಳನ್ನಿಟ್ಟಿರುವ ಮರದ ಪೆಟ್ಟಿಗೆಯಿದ್ದು ಎರಡು ಕಡೆಯೂ ದೇವತಾಮೂರ್ತಿಗಳಿರುತ್ತಿದ್ದವು. ಗರ್ಭಗೃಹ ಮತ್ತು ಅದರ ಮುಂದಿನ ಪವಿತ್ರ ಸ್ಥಳಗಳ ಸುತ್ತಲೂ ಮೂರು ಅಂತಸ್ತಿನಲ್ಲಿ ಸಣ್ಣ ಸಣ್ಣ ಕೊಠಡಿಗಳು. ಹೀಗೆ ಮೆಡಿಟರೇನಿಯನ್ ತೀರದ ದೇವಾಲಯಗಳು ಸುತ್ತಮುತ್ತಲ ಹಲವು ಶೈಲಿಗಳನ್ನು ಅಳವಡಿಸಿಕೊಂಡಿರುವುದು ಎದ್ದು ಕಾಣುತ್ತದೆ. ಪೈಲಾನುಗಳಿದ್ದು ಒಳಹೋಗುತ್ತ ಕಿರಿದಾಗುವ ರೀತಿ ಈಜಿಪ್ಟಿನದು; ದೇವತಾ ಮೂರ್ತಿಗಳು ಅಲಂಕರಣಗಳು ಮೆಸಪೊಟೇಮಿಯ ಶೈಲಿಯದು; ರಚನೆ ಮಾತ್ರ ಮೆಡಿಟೆರೇನಿಯನ್ ಶೈಲಿಯದು.

ಮಿನೋವನ್ ಸಂಸ್ಕøತಿಯಲ್ಲಿ ಗುಹೆಗಳೂ ಉನ್ನತ ಪ್ರದೇಶಗಳೂ ಪವಿತ್ರವೆಂದು ಭಾವಿಸಿದ್ದಂತೆ ತೋರುತ್ತದೆ. ಮುದ್ರೆಗಳು ಮತ್ತು ಗೋಡೆಗಳ ಮೇಲೆ ಉಳಿದು ಬಂದಿರುವ ಚಿತ್ರಗಳನ್ನು ನೋಡಿದಲ್ಲಿ ಅವು ಚಿಕ್ಕ ಗುಡಿಗಳೇ ಹೆಚ್ಚಾಗಿದ್ದುದನ್ನು ಸೂಚಿಸುತ್ತವೆ. ದೊಡ್ಡ ದೇವಾಲಯಗಳು ಬೆಳಕಿಗೆ ಬಂದಿಲ್ಲ. ಗ್ರೀಕರಿಗಿಂತ ಹಿಂದಿನ ಕಾಲದ ಈಜಿಯನ್ ಗುಡಿಗಳ ಮಾದರಿಯನ್ನು ಸುಮಾರು ಕ್ರಿ.ಪೂ. 1500ರಲ್ಲಿ ನಾಸಸ್‍ನಲ್ಲಿ ನಿರ್ಮಿಸಿದ್ದ ಅರಮನೆಯ ಗೋಡೆಯ ಮೇಲಿನ ಚಿತ್ರದಲ್ಲಿ ನೋಡಬಹುದು. ಗೋಡೆಯಿಂದಾವೃತವಾದ ಪವಿತ್ರಸ್ಥಳವಿದು ಅದು ಆರಾಧಕರಿಂದ ಮತ್ತು ಮರಗಳಿಂದ ತುಂಬಿರುವಂತೆ ಅಲ್ಲಿ ಚಿತ್ರಿಸಿದೆ. ಪ್ರಾಚೀನ ಗ್ರೀಕ್ ರಾಜ್ಯದಲ್ಲಿ ಪವಿತ್ರಾವರಣ ಹಾಗೂ ಅದರಲ್ಲಿ ಒಂದು ವೇದಿಕೆ ಇರುವುದೇ ದೇವಾಲಯಗಳ ಸಾಮಾನ್ಯರೂಪ. ಡೋರಿಯನ್ನರು ಅಲ್ಲಿಗೆ ಬಂದು ನೆಲಸಿದ ಎರಡು ಮೂರು ಶತಮಾನಗಳವರೆಗೂ ದೇವಾಲಯಗಳಿಗೆ ಕಟ್ಟಡಗಳಿರಲಿಲ್ಲ. ಕಟ್ಟಡಗಳನ್ನು ಕಟ್ಟಲು ಆರಂಭಿಸಿದ ಕಾಲದ ದೇವಾಲಯಗಳು ಆದಿಕಾಲದ ವಾಸದ ಮನೆಗಳಂತೆ ಹಲವು ಬಗೆಯವಾಗಿದ್ದವು. ಕಾಲಕ್ರಮೇಣ ದೀರ್ಘ ಚತುರಸ್ರಾಕಾರವನ್ನುಳಿಸಿ ಬೆಳೆಸಲಾಯಿತು. ಕಟ್ಟಡಗಳನ್ನು ಒಣಗಿಸಿದ ಇಟ್ಟಿಗೆಗಳಿಂದ ನಿರ್ಮಿಸಿ ಗೋಡೆಗಳ ಮೂಲೆಗಳಿಗೂ ಬಾಗಿಲುಗಳಿಗೂ ಮರದ ಚೌಕಟ್ಟುಗಳನ್ನಳವಡಿಸುತ್ತಿದ್ದರು. ಕಾಲಕ್ರಮದಲ್ಲಿ ಇದಕ್ಕೆ ಮುಂಭಾಗದಲ್ಲಿ ಒಂದು ಮುಖಮಂಟಪವನ್ನು ಸೇರಿಸಲಾಯಿತು. ಕಟ್ಟಡಗಳ ನಿರ್ಮಾಣಕಲೆ ಬೆಳೆದಂತೆ ದೇವಾಲಯಗಳ ಗಾತ್ರ ದೊಡ್ಡದಾದ ಹಾಗೆ, ಚಾವಣಿಗೆ ಆಧಾರವಾಗಿ ಒಂದು ಸಾಲು ಕಂಬಗಳನ್ನು ನಡುವೆ ಸೇರಿಸಿದರು. ಅನಂತರ ಎರಡು ಸಾಲು ಕಂಬಗಳು ಬಂದು ಮಧ್ಯಾಂಕಣದಲ್ಲಿ ಮತ್ತು ಇಕ್ಕೆಲದ ಹಜಾರುಗಳು ಬೇರೆ ಬೇರೆಯಾದುವು. ಒಳಗಿನ ಕಂಬಗಳ ಮಾದರಿಯನ್ನೇ ಹೊರಗಿನ ಮಂಟಪದ ಕಂಬಗಳಿಗೂ ಉಪಯೋಗಿಸಿದರು. ಕಾಲಕ್ರಮೇಣ ದೇವಸ್ಥಾನದ ಹಿಂಭಾಗದಲ್ಲಿ ಮತ್ತೊಂದು ಮಂಟಪ ನಿರ್ಮಾಣವಾಯಿತು. ಕಡೆಗೆ ದೇವಾಲಯದ ಸುತ್ತಲೂ ಕಂಬ ಸಾಲುಗಳು ಬಂದವು. ಈ ಶೈಲಿಯೇ ಉತ್ಕøಷ್ಟಶೈಲಿಯೆಂದು ಅಂಗೀಕೃತವಾಗಿ ಮುಂದುವರಿಯಿತು. ಇಂಥ ಹಲವು ದೇವಾಲಯಗಳು ಉಳಿದು ಬಂದಿವೆ. ಕ್ರಿ. ಪೂ. ಸುಮಾರು 10ರಿಂದ 7ನೆಯ ಶತಮಾನದ ಕಾಲದ್ದೆಂದು ತಿಳಿಯಲಾಗಿರುವ ಒಲಿಂಪಿಯಾದ ಹೇರ್ ದೇವಾಲಯ ಈ ಮಾದರಿಗಳಲ್ಲಿ ಅತ್ಯಂತ ಪ್ರಾಚೀನವಾದವುಗಳಲ್ಲೊಂದು. ಇದಕ್ಕೆ ಕಲ್ಲಿನ ತಳಹದಿಯಿದ್ದು ಗೋಡೆಗಳು ಒಣಗಿಸಿದ ಇಟ್ಟಿಗೆಯಿಂದ ನಿರ್ಮಾಣವಾಗಿದ್ದುವು. ಗೋಡೆಗಳ ಅಂಚುಗಳಲ್ಲಿನ ಮರದ ಅರಗಂಬಗಳು, ಬಾಗಿಲುವಾಡಗಳು ಒರಟಾಗಿದ್ದವು. ಸುತ್ತಲೂ ಮೊದಲು ಇದ್ದ ಮರದ ಕಂಬಸಾಲುಗಳಿಗೆ ಬದಲಾಗಿ ಕಾಲಕ್ರಮೇಣ ಕಲ್ಲಿನ ಕಂಬ ಸಾಲುಗಳನ್ನು ನಿಲ್ಲಿಸುತ್ತ ಬಂದರು. ಕ್ಲ್ಯಾಸಿಕ್ ಶೈಲಿ ಪ್ರಚಲಿತವಿದ್ದ ಕಾಲದುದ್ದಕೂ ಕಂಬಗಳ ಬದಲಾವಣೆ ನಡೆಯುತ್ತ ಹೋದುದರಿಂದ ಆಯಾ ಕಾಲದ ರೀತಿಯನ್ನು ಪ್ರತಿನಿಧಿಸುವಂತೆ ಕಂಬಗಳಲ್ಲಿ ಬಗೆಬಗೆಯ ನಯ ಅಥವಾ ಒರಟು ಕಂಡರಣೆಗಳನ್ನು ಕಾಣಬಹುದು. ಕ್ರಿ.ಪೂ. 7ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಗ್ರೀಕ್ ದೇವಾಲಯಗಳು ಒಂದು ಸಿದ್ಧ ರೂಪವನ್ನು ಪಡೆದವು. ಈ ಕಾಲದ ಕಾರಿಂತ್ ಪಟ್ಟಣದಲ್ಲಿರುವ ಶಿಥಿಲವಾಗಿರುವ ದೇವಾಲಯದ ಕಂಬಸಾಲು ಮುಂದಿನ ಡೋರಿಕ್ ಶೈಲಿಯ ಪರಿಪೂರ್ಣತೆಯ ಅಂಶಗಳನ್ನು ಹೊಂದಿದೆ. ಗ್ರೀಕರ ವಸಾಹತಾಗಿದ್ದ ದಕ್ಷಿಣ ಇಟಲಿ ಸಿಸಲಿಗಳಲ್ಲಿ ಇಂಥ ಪ್ರಾಚೀನ ಶೈಲಿಯ ಹಲವಾರು ದೇವಾಲಯಗಳಿವೆ. ಸೈರಾಕ್ಯುಸ್, ಸೆಗೆಸ್ಟ, ಸಲಿನಸ್, ಅಗ್ರಿಗೆಂಟಮ್ ಮೊದಲಾದ ಕಡೆ ಕ್ರಿ.ಪೂ 7-6ನೆ ಶತಮಾನಗಳಿಗೆ ಸೇರಿದ ಇಂಥ ಪ್ರಾಚೀನ ಡೋರಿಕ್ ದೇವಾಲಯಗಳಿದ್ದು ಒತ್ತಾಗಿನಿಂತ ಇವುಗಳ ಕಂಬಗಳು ಸ್ಥೂಲವೂ ತಗ್ಗಾದವೂ ಆಗಿವೆ. ಬೋದಿಗೆಗಳು ದೊಡ್ಡವು, ಅಡ್ಡತೊಲೆಗಳು ಸ್ಥೂಲ, ಶಿಲ್ಪ ಒರಟು.

ಗ್ರೀಕ್ ವಾಸ್ತು ಮುಂದೆ ಇದೇ ಶೈಲಿಯನ್ನುಳಿಸಿಕೊಂಡು ಬಂದರೂ ಪಾರಸೀ ಕದನದ ಅನಂತರ ಅಭಿರುಚಿ ಉತ್ತಮಗೊಂಡು ಕಟ್ಟಡದ ರಚನೆಯಲ್ಲಿ ಹೆಚ್ಚು ಕೌಶಲ್ಯ ತೋರಿಬರುತ್ತದೆ. ಕಂಬಗಳು ತೆಳುವಾದವು. ಬೋದಿಗೆಗಳು ಹಗುರವಾದವು. ಹಿಂದೆ ಮುಂದೆ ಆರೂ ಅಕ್ಕಪಕ್ಕಗಳಲ್ಲಿ ಹನ್ನೆರಡು ಅಥವಾ ಅದಕ್ಕೂ ಹೆಚ್ಚು ಕಂಬಗಳನ್ನು ಹೊಂದಿದ ದೇವಾಲಯಗಳು ಮಾದರಿಯೆನಿಸಿದವು. ಗೋಡೆಗೂ ಸುತ್ತುವರಿದ ಕಂಬ ಸಾಲುಗಳಿಗೂ ಅಂತರ ಕಂಬ ಕಂಬಕ್ಕಿರುವ ಅಂತರಕ್ಕಿಂತ ಹೆಚ್ಚಾಗಿದ್ದು, ಪೂರ್ವದಿಂದ ಬಂದ ಪದ್ಧತಿಯಂತೆ ಬಾಗಿಲಿನ ಮುಂದೆ ಚಿಕ್ಕದಾದ ಚಾಚು ಮಂಟಪವಿರುತ್ತಿತ್ತು. ಕಟ್ಟಡದ ಒಳಭಾಗದಲ್ಲಿ ಕೆಲವು ವೇಳೇ ಮುಂದೆ ದೊಡ್ಡದೂ ಹಿಂದೆ ಚಿಕ್ಕದೂ ಆದ ಎರಡು ಕೋಣೆಗಳಿರುತ್ತಿದ್ದು ಒಮ್ಮೊಮ್ಮೆ ದೊಡ್ಡ ಕೋಣೆಯಿಂದ ಚಿಕ್ಕಕೋಣೆಗೆ ಪ್ರವೇಶವಿರುತ್ತಿದ್ದರೂ ಸಾಮಾನ್ಯವಾಗಿ ಪಾರ್ತೆನಾನಿನಲ್ಲಿರುವಂತೆ ಹಿಂಭಾಗದಿಂದ ಮಾತ್ರ ಚಿಕ್ಕ ಕೋಣೆಗೆ ಪ್ರವೇಶ. ಈ ಹಿಂಭಾಗದ ಕೋಣೆ ಖಜಾನೆಯಾಗಿ ಉಪಯೋಗಿಸಲ್ಪಡುತ್ತಿತ್ತು. ದೊಡ್ಡ ಕೋಣೆಯಲ್ಲಿ ಜೋಡಿ ಕಂಬಸಾಲುಗಳಿದ್ದು ಒಂದೊಂದು ಸಲ ಮಧ್ಯಾಂಗಣ ಮತ್ತು ಇಕ್ಕೆಲದ ಹಜಾರಗಳಲ್ಲಿ ಎರಡು ಅಂತಸ್ತುಗಳಿರುತ್ತಿದ್ದುವು. ಬಾಗಿಲಿಗೆ ಎದುರಾಗಿ ಮಧ್ಯಾಂಗಣದ ಕೋಣೆ ಕೊನೆಯಲ್ಲಿ ಚರಿತ್ರಪೂರ್ವಕಾಲದ ಪುರಾತನ, ಆಕಾರ ರಹಿತ, ಮರದ ಬುಡವೊಂದನ್ನೋ ಅತ್ಯಂತ ಪರಿಪೂರ್ಣವಾದ ಮೂರ್ತಿ ಶಿಲ್ಪವೊಂದನ್ನೋ ಸ್ಥಾಪಿಸುತ್ತಿದ್ದರು. ಈ ಮೂರ್ತಿಗಳಲ್ಲಿ ಒಲಿಂಪಿಯದಲ್ಲಿನ ಜûೂಸ್ ಆತೆನ್ಸಿಗೆ ಸೇರಿದ್ದ ಪಾರ್ತೆನಾನಿನ ಆತೀನ ಮೂರ್ತಿಗಳು ಪ್ರಾಚೀನ ಕಾಲದ ಅತ್ಯಂತ ಮೆಚ್ಚಿಗೆಯ ಮೂರ್ತಿಗಳೆಂದು ಪ್ರಸಿದ್ಧವಾಗಿವೆ. ಗುಡಿಯೊಳಗೆ ಬಾಗಿಲಿನಿಂದ ಮಾತ್ರ ಬೆಳಕು ಬೀಳುತ್ತಿದ್ದು ಒಳಗೆ ಗಾಢವಾದ ಬಣ್ಣಗಳಿಂದ ಚಿತ್ರಿಸಿದ್ದ ವಾಸ್ತುಶಿಲ್ಪ ಮತ್ತು ಚಿನ್ನ ದಂತಗಳ ಮೂರ್ತಿಗಳ ಹೊಳಪು ಆಕರ್ಷಕವಾಗಿರುತ್ತಿದ್ದವು. ಹೊರಗಡೆಯೂ ಇದೇ ರೀತಿ ಗಾಢವರ್ಣಗಳ ಚಿತ್ರಗಳೂ ಶಿಲ್ಪಗಳೂ ಇದ್ದುವು. ಬಾಗಿಲ ಮೇಲ್ಗಡೆಯ ಮುಮ್ಮೂಲೆಯ ಭಾಗದಲ್ಲಿ ಪೂರ್ಣಾಕಾರದ ಸುಂದರವಾದ ಆಕೃತಿಯ ಮೂರ್ತಿಗಳು ಅತ್ಯಂತ ಮನೋಹರವಾಗಿ ಶೋಭಿಸುತ್ತಿದ್ದುವು. ಗ್ರೀಕ್ ದೇವಾಲಯಗಳ ಮತ್ತೊಂದು ವೈಶಿಷ್ಟ್ಯವೆಂದರೆ ಪ್ರಾಕಾರದಲ್ಲಿ ಮೂಲ ದೇವಾಲಯದೊಂದಿಗೆ ವೀರರ ಗುಡಿಗಳು, ಖಜಾನೆಗಳು, ಕಂಬಸಾಲುಗಳು, ಹಜಾರಗಳು ತುಂಬಿದ್ದುದು. ಹೀಗೆ ಎಲ್ಯೂಸಿಸ್ ಆರ್ಗೋಸ್, ಡೆಲಾಸ್, ಡೆಲ್ಫಿ, ಒಲಿಂಪಿಯಗಳ ದೇವಾಲಯಗಳು ಹಲವು ಕಟ್ಟಡಗಳ ಸಮೂಹಗಳಾಗಿ ಬೆಳೆದುವು.

ಏಷ್ಯ ಮೈನರಿನ ದೇವಾಲಯಗಳನ್ನೂ ಇದೇ ಮಾದರಿಯಲ್ಲಿಯೇ ಕಟ್ಟಿದ್ದರೂ ಅವುಗಳ ಮೇಲೆ ಅಯೋನಿಕ್ ಶೈಲಿಯ ಪ್ರಭಾವ ಹೆಚ್ಚಾಗಿದ್ದು ಅವುಗಳ ಶೈಲಿಯೇ ಬೇರೆಯಾಗಿದೆ. ಇಲ್ಲಿ ಡೋರಿಕ್ ಶೈಲಿಗಿಂತ ಅಯೋನಿಕ್ ಶೈಲಿಯ ಕಟ್ಟಡಗಳೇ ಹೆಚ್ಚು. ಡೋರಿಕ್ ಕಟ್ಟಡಗಳಲ್ಲಿ ವಿವರಗಳ ಪರಿಪೂರ್ಣತೆ ಹಾಗೂ ನವಿರು ಕೆಲಸಗಳ ಮೂಲಕ ಸೌಂದರ್ಯವನ್ನು ಸಾಧಿಸಿದ್ದರೆ ಅಯೋನಿಕ್ ಕಟ್ಟಡಗಳಲ್ಲಿ ಬೃಹದ್ಗಾತ್ರ ಮತ್ತು ಅತಿ ಅಲಂಕರಣಗಳಿಂದ ಅದನ್ನು ಸಾಧಿಸಿದ್ದಾರೆ.

ಎಟ್ರೂರಿಯ ದೇಶದ ದೇವಾಲಯಗಳು ಉಳಿದುಬಂದಿಲ್ಲ. ಆದರೆ ಅವನ್ನು ವರ್ಣಿಸಿರುವ ಗ್ರಂಥಗಳಿಂದ, ಮರದ ಕೆತ್ತನೆಗಳಲ್ಲಿ ಜೇಡಿಯ ಅಲಂಕರಣಗಳಲ್ಲಿ ಉಳಿದು ಬಂದಿರುವ ಅವುಗಳ ಮಾದರಿಗಳಿಂದ ಅವುಗಳ ಶೈಲಿಯನ್ನು ತಿಳಿಯಬಹುದು. ಅವುಗಳ ಕಿರಿದಾದ ಗರ್ಭಗುಡಿಗಳು ತಗ್ಗಾದವೂ ಚೌಕವಿನ್ಯಾಸದವೂ ಆಗಿದ್ದುವು. ಮುಂದಿನ ಮುಖಮಂಟಪಕ್ಕೆ ಮಾತ್ರ ಕಂಬಗಳಿರುತ್ತಿದ್ದುವು. ಮರದ ಹಲಗೆಗಳಿಂದಾದ ಚೌವಣಿಯನ್ನು ಜೇಡಿಯ ಬಿಲ್ಲೆಗಳಿಂದ ಮುಚ್ಚುತ್ತಿದ್ದುದುಂಟು. ಕಂಬಗಳ ನಡುವೆ ಗ್ರೀಕ್ ದೇವಾಲಯಗಳಲ್ಲಿರುವುದಕ್ಕಿಂತ ಅಂತರ ಹೆಚ್ಚು.

ರೋಮಿನ ದೇವಾಲಯಗಳು ಎಟ್ರೂರಿಯದ ದೇವಾಲಯಗಳ ಶೈಲಿಯಿಂದ ಪ್ರಭಾವಿತವಾದುವು. ಕ್ಯಾಪಿಟೊಲೈನ್ ಪರ್ವತದ ಮೇಲಿರುವ ಜ್ಯೂಪಿಟರ್ ದೇವಾಲಯ ಪ್ರಾಚೀನ ಎಟ್ರೂರಿಯನ್ ಶೈಲಿಯನ್ನು ಕಡೆಯ ವರೆಗೂ ಉಳಿಸಿ ಕೊಂಡು ಬಂತು. ಅದರಲ್ಲಿ ವಿಶಾಲವಾದ ತಗ್ಗಾದ ಗುಡಿಯಿದ್ದು ಅದನ್ನು ಮೂರು ಕೋಣೆಗಳಾಗಿ ವಿಂಗಡಿಸಿದೆ. ಈ ಮೂರು ಕೋಣೆಗಳ ಮುಂದೆಯೂ ಹಲವು ಕಂಬಗಳುಳ್ಳ ಉದ್ದವಾದ ಮಂಟಪಗಳುಂಟು. ರೋಂ ಚಕ್ರಾಧಿಪತ್ಯವಾದ ಅನಂತರ ಅತ್ಯಂತ ದೊಡ್ಡವಾದ ಮತ್ತು ಅತ್ಯದ್ಭುತವಾದ ದೇವಾಲಯಗಳಿಗೆ ಮಾತ್ರ ಸುತ್ತುಗಂಬಗಳ ವಿನ್ಯಾಸವನ್ನಳವಡಿಸಿದರು. ರೋಮಿನಲ್ಲಿರುವ ರೋಮ್ ಮತ್ತು ವೀನಸ್ ದೇವತೆಗಳ ಜೋಡಿ ದೇವಾಲಯಗಳಲ್ಲಿ ಇದನ್ನು ನೋಡಬಹುದು. ಇದರ ವಿನ್ಯಾಸವನ್ನು ರಚಿಸಿದವನು ಅಪೊಲೊಡೋರಸ್. ಉಳಿದಂತೆ ಸಾಮಾನ್ಯವಾಗಿ ಗುಡಿಗಳ ಮುಂಭಾಗದಲ್ಲಿ ಮಾತ್ರ ಮಂಟಪವಿರುತ್ತದೆ. ಆದರೂ ದೇವಾಲಯದ ಗೋಡೆಗಳಿಗೆ ಅರೆಗಂಬಗಳ ಅಥವಾ ಒತ್ತುಗಂಬಗಳ ಅಲಂಕರಣವಿರುವುದುಂಟು. ರೋಮಿನಲ್ಲಿರುವ ಸುಮಾರು ಕ್ರಿ.ಪೂ 2-1ನೆಯ ಶತಮಾನದ ಫಾಚ್ರ್ಯುನವಿರಿಲಿಸ್ ದೇವಾಲಯದಲ್ಲಿ ಅದರ ಮೂರು ಕಡೆಯೂ ಮುಂದಿನ ಮಂಟಪದ ಕಂಬಗಳ ಮಾದರಿಯಲ್ಲಿಯೇ ಇರುವ ಒತ್ತುಕಂಬಗಳನ್ನು ನೋಡಬಹುದು. ಈಗ ಉಳಿದುಬಂದಿರುವ ಪರಿಪೂರ್ಣವಾದ ರೋಮನ್ ಶೈಲಿಯ ಉದಾಹರಣೆ ಎಂದರೆ ನೀಮ್‍ನಲ್ಲಿರುವ ಮೇಸನ್ ಕ್ಯಾರಿ ದೇವಾಲಯ. ಇದು ಮೇಲೆ ತಿಳಿಸಿರುವ ದೇವಾಲಯಕ್ಕಿಂತ ದೊಡ್ಡ ಪ್ರಮಾಣದಲ್ಲಿದೆ. ರೋಮನ್ ದೇವಾಲಯಗಳ ಮತ್ತೊಂದು ವೈವಿಧ್ಯವೆಂದರೆ ಅವುಗಳ ಮೂಲವಾದ ಎಟ್ರೂರಿಯನ್ ಶೈಲಿಯಲ್ಲಿದ್ದಂತೆ ಅವನ್ನು ಉನ್ನತವಾದ ಜಗತಿಯ ಮೇಲೆ ನಿರ್ಮಿಸುವುದು. ಗ್ರೀಕ್ ದೇವಾಲಯಗಳಿಗಿಂತ ರೋಮನ್ ದೇವಾಲಯಗಳು ವಿಶಾಲವಾದುವೂ ವಿಪುಲವಾದ ಅಲಂಕರಣವುಳ್ಳವೂ ಆಗಿದ್ದುವು. ಗೋಡೆಗಳ ಅಲಂಕರಣದಲ್ಲಿಯೂ ಶ್ರೀಮಂತಿಕೆ ಇರುತ್ತಿತ್ತು. ಅಮೃತಶಿಲೆಯಿಂದ ಗೋಡೆಗಳ ಮೇಲ್ಮೈಯನ್ನಾಚ್ಛಾದಿಸುವುದು, ಅರೆಗಂಬಗಳನ್ನೋ ಒತ್ತುಗಂಬಗಳನ್ನೋ ಜೋಡಿಸುವುದು, ಅಲ್ಲಲ್ಲಿ ಕಿರುಗಂಬಗಳನ್ನುಳ್ಳ ಅರೆಮಂಟಪಗಳನ್ನಿಡುವುದು ಇತ್ಯಾದಿ. ಸಿರಿಯದ ಬಾಲ್ಬೆಕ್ಕಿನಲ್ಲಿ ಹ್ಯಾಡ್ರಿಯನ್ನನ ಕಾಲದಲ್ಲಿ ಆರಂಭಿಸಿ ಮೂರನೆಯ ಶತಮಾನದಲ್ಲಿ ಪೂರೈಸಿದ ದೇವಾಲಯಗಳ ಸಮೂಹ ಇಂಥ ಭವ್ಯತೆಗೆ ಹೆಸರಾದುವು. ಗ್ರೀಕ್ ದೇವಾಲಯಗಳ ಪವಿತ್ರಾವರಣದಲ್ಲಿ ಅಡ್ಡಾದಿಡ್ಡಿಯಾಗಿ ಕಟ್ಟಿರುವ ಕಟ್ಟಡಗಳಿಂದುಂಟಾಗುವ ರಮ್ಯತೆ ರೋಮನ್ ದೇವಾಲಯಗಳಲ್ಲಿಲ್ಲ. ಈ ದೇವಾಲಯಗಳನ್ನಾವರಿಸಿ ಕಂಬಸಾಲುಗಳುಳ್ಳ ದೀರ್ಘಚತುರ ಸ್ರಾಕಾರದ ಪ್ರಾಕಾರಗಳಿರಬಹುದು. ಅಥವಾ ಯಾವ ಆವರಣವೂ ಇಲ್ಲದೆ ರಸ್ತೆಗಳ ಮೂಲೆಗಳಿಗೆ ಹೊಂದಿದಂತೆ ದೇವಾಲಯಗಳಿರಬಹುದು. ಹಲವು ದೇವಾಲಯಗಳನ್ನು ಸಾರ್ವಜನಿಕ ಸಭಾಸ್ಥಾನಗಳಲ್ಲಾಗಲಿ ಅಥವಾ ಅವುಗಳ ಕಡೆ ಮುಖ ಮಾಡಿಕೊಂಡಂತಾಗಲಿ ಕಟ್ಟಿದ್ದುದರಿಂದ ಈ ಸಾರ್ವಜನಿಕ ಸಭಾಸ್ಥಾನಗಳೇ ಅವಕ್ಕೆ  ಪವಿತ್ರಾವರಣಗಳಾಗುತ್ತಿದ್ದುವು.
ಮೇಲೆ ತಿಳಿಸಿದ ದೇವಾಲಯಗಳ ರೀತಿಗೆ ವ್ಯತಿರೇಕವಾರಂಗಿನ ದೇವಾಲಯಗಳೂ ಉಂಟು. ಬ್ರೆಸಿಯದ ವೆಸ್ಟಾಸಿಯನ್ ದೇವಾಲಯಗದಲ್ಲಿ ಮೂರು ಕೋಣೆಗಳಿದ್ದು ಮಧ್ಯದ ಕೋಣೆಯ ಮುಂದಿನ ಮಂಟಪ ಉಳಿದೆರಡರ ಮುಂದಿರುವ ಕಿರುಮಂಟಪಗಳಿಗಿಂತ ಹೆಚ್ಚು ಉದ್ದವಾಗಿದೆ. ಗುಂಡಾಗಿ ಕಟ್ಟಿರುವ ದೇವಾಲಯಗಳೂ ಉಂಟು. ಗುಂಡು ದೇವಾಲಯಗಳಲ್ಲಿ ಅತ್ಯಂತ ಭವ್ಯವಾಗಿರುವುದು ರೋಮಿನಲ್ಲಿರುವ ಪ್ಯಾಂತೀಯಾನ್. ಗುಮ್ಮಟವುಳ್ಳ ಇದರ ವಿಶಾಲವಾದ ಹಜಾರದ ವ್ಯಾಸ 140 ಅಡಿಗಳಿಗೂ ಹೆಚ್ಚಾಗಿದ್ದು ಇದರ ಒಳ ಆವರಣ ಪ್ರಪಂಚದಲ್ಲಿಯೇ ಒಂದು ಅತ್ಯಂತ ಮನಮುಟ್ಟುವಂತಿರುವ ಆಕರ್ಷಣೆಯಾಗಿದೆ.

ಕಾಂಬೋಡಿಯ ಬರ್ಮ ಜಾವ ಮತ್ತು ಸುತ್ತಮುತ್ತಲ ದ್ವೀಪಗಳಲ್ಲಿ ಇರುವ ದೇವಾಲಯಗಳಲ್ಲಿ ಭಾರತದ ಶೈಲಿಯ ಪ್ರಭಾವ ಸ್ವಷ್ಟವಾಗಿದೆ. ಅನೇಕ ಹಿಂದೂ ಮತ್ತು ಬೌದ್ಧ ದೇವಾಲಯಗಳು ಬೃಹದಾಕಾರದಲ್ಲಿ ಇಲ್ಲಿ ನಿರ್ಮಿತವಾಗಿವೆ. ಸ್ತೂಪಾಕೃತಿಯನ್ನನುಕರಿಸಿ ಬೆಳಸಿದ ಶೈಲಿಯನ್ನು ರಂಗೂನಿನಷ್ಟೆ ದಾಗೋ ಪಗೋಡದಲ್ಲಿ ನೋಡಬಹುದು. ಒಟ್ಟು 350 ಅಡಿಗಳಿಗೂ ಹೆಚ್ಚು ಎತ್ತರವಾಗಿ ಮೇಲೆದ್ದ ಮಧ್ಯದ ಗೋಪುರ ಅದನ್ನು ಸುತ್ತುವರಿದ ಅನೇಕ ಕಿರುಸ್ತೂಪಮಾದರಿಗಳು ಅವುಗಳ ಮೇಲೆ ಉನ್ನತವಾದ ಕಳಶಗಳು ಈ ಎಲ್ಲದರ ಮೇಲ್ಮೈಯನ್ನು ಮುಚ್ಚಿರುವ ಚಿನ್ನದ ಮುಲಾಮು-ಇವು ಇದರ ಮುಖ್ಯ ಲಕ್ಷಣಗಳು. ಜಾವಾದ ಬೋರೊಬದೂರಿನ ಪ್ರಸಿದ್ಧವಾದ ಸ್ತೂಪವನ್ನು 150 ಅಡಿ ಎತ್ತರದ ಗುಡ್ಡವನ್ನೇ ಬಳಸಿಕೊಂಡು ಕಟ್ಟಿದೆ. ಒಂಬತ್ತು ಅಂತಸ್ತುಗಳಲ್ಲಿ ಮೇಲೇರಿ ಕೊನೆಯಲ್ಲಿ ಒಂದು ದೊಡ್ಡದಾದ ಸ್ಥೂಪ ಅದನ್ನು ಸುತ್ತುವರಿದ ಹದಿನಾರು ಕಿರಿಯ ಸ್ತೂಪಗಳನ್ನು ಅದು ಹೊಂದಿದೆ. ಪ್ರತಿ ಅಂತಸ್ತಿನ ಗೋಡೆಗಳ ಮೇಲೂ ಬುದ್ಧನ ಜೀವನ ಮತ್ತು ಇತರ ಸಾಮಾನ್ಯ ಜನಜೀವನವನ್ನು ಪ್ರತಿಬಿಂಬಿಸುವ ಶಿಲ್ಪಗಳು ತುಂಬಿವೆ. ಒಂಬತ್ತನೆಯ ಶತಮಾನದಲ್ಲಿ ನಿರ್ಮಿಸಲಾದ ಈ ಮಹಾಸ್ತೂಪ ಇಂಡೋಜಾವನೀಸ್ ಶೈಲಿಯಲ್ಲಿದೆ. ಕಾಂಬೋಡಿಯಾದಲ್ಲಿರುವ ಬೃಹದ್ದೇವಾಲಯಗಳಲ್ಲಿ ಪ್ರಸಿದ್ಧವಾದುದು ಆಂಗ್ಕೋರ್ ವಾತ್ ದೇವಾಲಯ. ವಿಶಾಲವಾದ ಆವರಣವನ್ನು ಸುತ್ತುವರಿದ ಹೊರಗೋಡೆಗಳು, ಅವನ್ನು ಬಳಸಿದ ಕಂದಕ, ಮೂರು ಅಂತಸ್ತುಗಳಲ್ಲಿ ಮೇಲೆದ್ದ ಭವ್ಯವಾದ ದೇವಾಲಯ, ಮೂಲೆಗೋಪುರಗಳು ಮುಖಭದ್ರಗಳು ಹಾಗೂ ರಂಗಮಂಟಪಗಳಿಂದ ಕೂಡಿದ ಈ ದೇವಾಲಯದ ನಡುವಣ ಗೋಪುರದ ಎತ್ತರ ಇನ್ನೂರು ಅಡಿಗೂ ಹೆಚ್ಚು. ರಾಮಾಯಣ ಭಾರತಗಳಿಂದಾಯ್ದ ವಸ್ತುವನ್ನು ಬೃಹದ್ಗಾತ್ರದಲ್ಲಿ ಚಿತ್ರಿಸಿರುವ ಈ ದೇವಾಲಯದ ಶಿಲ್ಪಗಳೂ ಅಲಂಕರಣಗಳೂ ಮೂಲತಃ ಖ್ಮೇರ್ ಶೈಲಿಯಲ್ಲಿದ್ದರೂ ಭಾರತೀಯ ವಾಸ್ತುಶಿಲ್ಪಶೈಲಿಯ ಪ್ರಭಾ ಅವುಗಳ ಮೇಲೆ ಹೆಚ್ಚಾಗಿದೆ. ಇದರೊಂದಿಗೆ ಆಂಗ್ಕೋರ್‍ಥೋಮ್ ನಗರವನ್ನು ಸುತ್ತುವರಿದ ಗೋಡೆಗಳಿಗೆ ಹೊಂದಿಕೊಂಡ ಐದು ಪ್ರವೇಶದ್ವಾರಗಳಿಗೂ ಬೃಹದ್ಗೋಪುರಗಳೂ ಆ ಗೋಪುರಗಳ ನಾಲ್ಕು ಮುಖಗಳಲ್ಲಿಯೂ ಬುದ್ಧನ ಆಕೃತಿಗಳೂ ನಡುವೆ ಮಹತ್ತರವಾದ ಪರ್ವತ ದೇವಾಲಯವೂ ಇದ್ದು ಇವು ಜಗತ್ಪಸಿದ್ಧವಾಗಿದೆ.

ಜಪಾನ್ ಮತ್ತು ಚೀನಗಳಲ್ಲಿ ದೇವಾಲಯಗಳ ರಚನೆಯ ರೀತಿಯೇ ಬೇರೆ. ಚೀನದಲ್ಲಿನ ತಾವೋ ಪಂಥದ ದೇವಾಲಯಗಳಲ್ಲಾಗಲೀ ಬೌದ್ಧಪಂಥದ ದೇವಾಲಯಗಳಲ್ಲಾಗಲಿ ರಚನೆಯಲ್ಲಿ ಮೂಲತಃ ಸಮಪ್ರಮಾಣವನ್ನು ಕಾಣಬಹುದು. ಇವು ದೀರ್ಘಚತುರ ಪ್ರಾಕಾರದಲ್ಲಿರುತ್ತವೆ. ಮೊದಲು ಒಂದು ಪ್ರವೇಶ ದ್ವಾರವಿದ್ದು ಒಳಹೊಕ್ಕರೆ ದೇವಾಲಯದ ಹೊರ ಅಂಗಳವಿರುತ್ತದೆ. ಪ್ರವೇಶಾದ್ವಾರ ಸಾಮಾನ್ಯವಾಗಿ ಕಮಾನುಚಾವಣಿಯಿಂದ ಕೂಡಿರುತ್ತದೆ. ಅದರ ಒಳಹೊಕ್ಕ ಕೂಡಲೇ ಎರಡು ಕಡೆಯೂ ಒಂದೊಂದು ಚಿಕ್ಕ ಗೋಪುರವಿದ್ದು ಒಂದರಲ್ಲಿ ನಗಾರಿಯೂ ಇನ್ನೊಂದರಲ್ಲಿ ಗಂಟೆಯೂ ಇರುತ್ತವೆ. ಮುಂದರೆ ಹೋದರೆ ಹಲವು ಕಂಬಗಳುಳ್ಳ ಪ್ರಾರ್ಥನಾ ಮಂದಿರ; ಇದಕ್ಕೆ ಹಲವು ಅಡ್ಡತೊಲೆಗಳಿಂದ ಮನೆಮನೆಯಾಗಿ ವಿಂಗಡಿಸಿರುವ ಒಳಚಾವಣಿ. ಹಿಂದಿನ ಗೋಡೆಗೆ ಸೇರಿದಂತೆ ಒಂದು ಉನ್ನತವಾದ ಪೀಠ. ಅದರ ಮೇಲೆ ಸಾಮಾನ್ಯವಾಗಿ ಮೂರು ಮೂರ್ತಿಗಳಿದ್ದು ಅವುಗಳ ಮುಂದಿನ ಎತ್ತರವಾದ ವೇದಿಕೆಯ ಮೇಲೆ ಪೂಜಾ ಸಾಮಗ್ರಿಗಳಿರುತ್ತವೆ. ಕಾನ್‍ಫೂಷಸ್ಸನ ದೇವಾಲಯಗಳಲ್ಲಿ ಮೂರ್ತಿಗಳ ಬದಲು ಒಂದು ಅಲಂಕೃತವಾದ ಮಂಟಪ ಇರುವುದುಂಟು. ಕೆಲವು ವೇಳೆ ಈ ಮಂದಿರದ ಹಿಂಭಾಗದಲ್ಲಿ ಮತ್ತೊಂದು ಅಂಗಳ ಅದರ ಹಿಂದೆ ಮತ್ತೊಂದು ಮಂದಿರ ಇರುತ್ತವೆ. ಬೃಹದ್ದೇವಾಲಯಗಳಲ್ಲಿ ಈ ಅಂಗಳಗಳೂ ಮಂಟಪಗಳು ನಾಲ್ಕು ದಿಕ್ಕಿನಲ್ಲಿ ಬೆಳೆದಿರುವುದನ್ನು ಕಾಣಬಹುದು. ತಾವೂ ಪಂಥದ ದೇವಾಲಯಗಳಲ್ಲಿ ಮುಖ್ಯ ದೇವಾಲಯದ ನಡುವೆ ಇರುವುದಲ್ಲದೆ ನಗಾರಿ ಮತ್ತು ಗಂಟೆ ಗೋಪುರಗಳಿರುವುದಿಲ್ಲ. ಕೆಲವು ವೇಳೆ ಐನೂರ್ವರು ಲೋಹಾನರ ಎಂದರೆ ಮಹಿಮಾ ಪುರುಷರ ಮೂರ್ತಿಗಳನ್ನು ಸಾಲಾಗಿ ನಿಲ್ಲಿಸಿರುವುದುಂಟು. ಉತ್ತರ ಚೀನಾದ ದೇವಾಲಯಗಳು ಪೀಕಿಂಗ್ ಶೈಲಿಯ ಭವ್ಯವಾದ ಮಹತ್ಕøತಿಗಳು. ಯಾಂಗ್‍ಟ್ಸಿ ಕಣಿವೆಯಲ್ಲಿ ದೇವಾಲಯಗಳು ಅತ್ಯಂತ ಆಕರ್ಷಕವಾಗಿದ್ದು ಹೆಚ್ಚು ಬಾಗಿದ ಚಾವಣಿಗಳು ಮತ್ತು ತೆಳುಗಂಬಗಳಿಂದ ಕೂಡಿರುತ್ತವೆ. ದಕ್ಷಿಣ ಭಾಗದಲ್ಲಿ ಮರದ ಕಂಬಗಳಿಗೆ ಬದಲು ಕಗ್ಗಲ್ಲಿನ ಕಂಬಗಳಿರುತ್ತವೆ. ಚಾವಣಿಯ ಮುಂಭಾಗದಲ್ಲಿ ಅತ್ಯಂತ ನವುರಾದ ಕಂಡರಣೆ ಇರುವುದಲ್ಲದೆ ಒಳಭಾಗದ ಮರದ ಕೆತ್ತನೆಯ ಕೆಲಸ ಸೂಕ್ಷ್ಮವಾಗಿ ಮನೋಜ್ಞವಾಗಿ ಇರುತ್ತವೆ. ಕ್ಯಾಂಟನ್ನಿನ ದೇವಾಲಯ ಇದಕ್ಕೆ ಒಂದು ಉತ್ತಮ ಉದಾಹರಣೆ.

ಜಪಾನಿನ ದೇವಾಲಯಗಳನ್ನು ವಿಸ್ತಾರವಾಗಿ ಬೆಳಸುವ ಸಂಪ್ರದಾಯವಿಲ್ಲ. ಷಿಂಟೊ ದೇವಾಲಯಗಳು ಪುರಾತನ ಮನೆಗಳಂತೆ ಸಾಮಾನ್ಯವಾದ ದೀರ್ಘಚತುರ ಪ್ರಾಕಾರದ ಹೆಚ್ಚು ಇಳಿಜಾರು ಚಾವಣಿಗಳುಳ್ಳ ಕಟ್ಟಡಗಳು. ಆದರೂ ಅವುಗಳ ದಾರಿಯಲ್ಲಿ ಅಲ್ಲಲ್ಲಿ ನಿಲ್ಲಿಸಿರುವ ತೋರಣಗಳಿಂದಲೂ ಭಕ್ತಾದಿಗಳ ಹರಕೆ ಹೊತ್ತು ನಿಲ್ಲಿಸಿರುವ ಅನೇಕ ದೀಪಸ್ತಂಭಗಳಿಂದಲೂ ಇವಕ್ಕೆ ಸೌಂದರ್ಯವೊದಗಿದೆ. ಬೌದ್ಧ ದೇವಾಲಯಗಳಲ್ಲಿನ ಮಂದಿರಗಳು ಚೀನದ ದೇವಾಲಯಗಳ ಮಾದರಿಯಲ್ಲಿಯೇ ಇದ್ದರೂ ಅವುಗಳ ಅಲಂಕರಣ ಮಾತ್ರ ಜಪಾನ್ ಶೈಲಿಯಲ್ಲಿದೆ. ಚಾವಣಿ ಲೋವೆ ಮುಂತಾದವುಗಳ ಅಲಂಕರಣಗಳು ಬಗೆಬಗೆಯಾಗಿವೆ. ಇವುಗಳ ನಿರ್ಮಾಣದಲ್ಲಿ ಸಮರೂಪತೆ ಇಲ್ಲದಿದ್ದರೂ ಗುಡ್ಡಗಳ ಹಿನ್ನಲೆಯಲ್ಲಿ ನಿಸರ್ಗ ಸೌಂದರ್ಯವನ್ನೊಳಗೊಂಡಂತೆ ನಿರ್ಮಿಸಿರುವ ಈ ದೇವಾಲಯಗಳ ರಚನೆ ಆಶ್ಚರ್ಯಕರವಾದುದು. ನಿಕ್ಕೊ ಮತ್ತು ಕ್ಯೋಟೊಗಳಲ್ಲಿರುವ ದೇವಾಲಯಗಳು ಇಂಥ ಸೌಂದರ್ಯಕ್ಕೆ ಹೆಸರಾದವು.

ಭಾರತದಲ್ಲಿ : ವಿಶಾಲವಾದ ಭರತಖಂಡದಲ್ಲಿ ದೇವಾಲಯಗಳ ರಚನೆ ವೈವಿದ್ಯಮಯವಾಗಿ ಬೆಳೆಯಲು ಪ್ರಾಕೃತಿಕ ಪರಿಸರ, ಕಟ್ಟಡ ಸಾಮಗ್ರಿಗಳ ಅನುಕೂಲ್ಯ, ಕಾಲಕಾಲಕ್ಕೆ ಪ್ರಬಲವಾಗುತ್ತಿದ್ದ ಬೇರೆ ಬೇರೆ ಮತಗಳು, ಜನರ ಅಭಿರುಚಿ ರಾಜರ ಪ್ರೋತ್ಸಾಹ, ಹೊರದೇಶಗಳ ಪ್ರಭಾವ ಮೊದಲಾದ ಹಲವು ಕಾರಣಗಳುಂಟು. ಬೌದ್ಧ, ಜೈನ, ಶೈವ, ವೈಷ್ಣವ - ಮತ ಯಾವುದೇ ಆಗಲಿ ಆಯಾ ಕಾಲಕ್ಕೆ ಆಯಾ ಪ್ರದೇಶಗಳಲ್ಲಿ ಪ್ರಚಲಿತವಿದ್ದ ವಾಸ್ತುಶಿಲ್ಪ ಶೈಲಿಗಳಲ್ಲಿ ತಮ್ಮ ಕೆಲವು ವೈಶಿಷ್ಟ್ಯಗಳನ್ನುಳಿಸಿಕೊಂಡು, ಅಳವಡಿಸಿಕೊಂಡು ಜನ ತಮ್ಮ ತಮ್ಮ ದೇವಾಲಯಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಮುಖ್ಯವಾಗಿ ಆಯಾ ಮತಗಳಿಗೆ ಸಂಬಂಧಿಸಿದ ಮೂರ್ತಿಗಳನ್ನುಳಿದಂತೆ, ಅವರ ಪೂಜಾವಿಧಾನಕ್ಕನುಸಾರವಾಗಿ ಮಾಡಿಕೊಂಡ ಸಣ್ಣಪುಟ್ಟ ಹೊಂದಾಣಿಕೆಯನ್ನು ಬಿಟ್ಟರೆ ದೇವಾಲಯಗಳ ರಚನೆ, ವಿನ್ಯಾಸ, ಅಲಂಕರಣವೇ ಮೊದಲಾದುವುಗಳಲ್ಲಿ ಹೆಚ್ಚು ವ್ಯತ್ಯಾಸವಿರದು. 

ಭಾರತದಲ್ಲಿ ದೇವಾಲಯಗಳ ಆರಂಭ ಯಾವಾಗ ಆಯಿತೆಂದು ಹೇಳಲಾಗದು. ಬಹು ಪ್ರಾಚೀನ ಕಾಲದಲ್ಲಿಯೇ ಇಲ್ಲಿನ ಜನ ತಮ್ಮ ದೇವರಿಗಾಗಿ ಪ್ರತ್ಯೇಕವಾದ ಕಟ್ಟಡಗಳನ್ನು ಮಣ್ಣಿನಿಂದ, ಮರಮುಟ್ಟುಗಳಿಂದ ನಿರ್ಮಿಸುತ್ತಿದ್ದ ಸೂಚನೆಗಳಿವೆ. ಇಟ್ಟಿಗೆ ಕಲ್ಲುಗಳಿಂದ ಕಟ್ಟಲಾರಂಭವಾದಿಂದೀಚಿನ ಆ ಮಂದಿರಗಳ ಅವಶೇಷಗಳನ್ನು ಮಾತ್ರ ಈಗ ಗುರುತಿಸಬಹುದು. ಕಲ್ಲಿನಲ್ಲಿ ನಿರ್ಮಿತವಾದ ಅತ್ಯಂತ ಪ್ರಾಚೀನ ಕಟ್ಟಡಗಳಲ್ಲಿ ಮರದಿಂದ ನಿರ್ಮಿಸಿದ ಕಟ್ಟಡಗಳ ಅನುಕರಣೆ ಇರುವುದು ಮೇಲಿನ ಸೂಚನೆಗೆ ಇಂಬು ಕೊಡುತ್ತದೆ.
ಈಗ ಸ್ಪಷ್ಟವಾಗಿ ಗುರುತಿಸಬಹುದಾದ ಅತ್ಯಂತ ಪ್ರಾಚೀನ ಪೂಜಾಮಂದಿರಗಳೆಂದರೆ ಕ್ರಿ.ಪೂ. ಮೂರನೆಯ ಶತಮಾನಕ್ಕೆ ಒಯ್ಯಬಹುದಾದ ಸ್ತೂಪಗಳು, ಮುಖ್ಯವಾಗಿ ಬೌದ್ಧರು ಬುದ್ಧನ ಅವಶೇಷಗಳಿಗಾಗಿ ನಿರ್ಮಿಸಿದ ಈ ಸ್ಮಾರಕಗಳು ಇಟ್ಟಿಗೆಯಿಂದ ನಿರ್ಮಿತವಾದವು. ಎಂಟು ಅರಗಳುಳ್ಳ ಬಂಡಿಯ ಚಕ್ರದ ವಿನ್ಯಾಸದಲ್ಲಿದ್ದು ಗುಂಡಾಗಿ ಮೇಲೆಳುವ ಈ ಕಟ್ಟಡದ ಮೇಲ್ಭಾಗ ಅರೆಗೋಲಾಕಾರದಲ್ಲಿರುತ್ತದೆ. ಅರಗಳ ನಡುವೆ ಒಂದಡೆ ಬುದ್ಧನ ಅವಶೇಷಗಳನ್ನು ಹೊಂದಿದ ಒಂದು ಸಂಪುಟ ಅದರೊಂದಿಗೆ ಹರಕೆಯ ಸಾಮಾನುಗಳನ್ನಿಟ್ಟು ಅದರ ಮೇಲೆ ಯಾವ ಸಂದುಗಳೂ ಇಲ್ಲದಂತೆ ಗಟ್ಟಿಯಾಗಿ ಸ್ತೂಪದ ಕಟ್ಟಡವನ್ನೆತ್ತಿರುವುದು ವಾಡಿಕೆ. ಹೀನಯಾನ ಪಂಥದವರು ನಿರ್ಮಿಸಿದ ಸ್ತೂಪಗಳು ಸರಳವಾದವು; ಬಹುಮಟ್ಟಿಗೆ ಇಟ್ಟಿಗೆಯವು. ಮಹಾಯಾನದ ಕಾಲಕ್ಕೆ ಬರುವ ಹೊತ್ತಿಗೆ ಇವು ಅದ್ಭುತವಾಗಿ ನಿರ್ಮಾಣವಾಗುತ್ತ ಹೋಗುತ್ತವೆ. ಎತ್ತರವಾದ ಜಗತಿಯ ಮೇಲೆ ನಿರ್ಮಾಣವಾದ ಸ್ತೂಪದ ಮೇಲ್ಮೈಯನ್ನು ಶಿಲಾಫಲಕಗಳಿಂದ ಮುಚ್ಚಿದ್ದು ಜಗತಿಯ ನಾಲ್ಕು ಕಡೆಯೂ ಮುಂಚಾಚಿದ ಭಾಗಗಳ ಮೇಲೆ ಆಯಕ ಸ್ತಂಭಗಳಿರುತ್ತವೆ. ಜಗತಿಯ ಮೇಲೆ ಸುತ್ತಲೂ ಕಿಸುಕಟಾಂಜನವಿರುವುದಲ್ಲದೆ ಸ್ತೂಪವನ್ನು ಸುತ್ತುವರಿದ ಒಂದು ದೊಡ್ಡ ಕಟಾಂಜನವೂ ಅದಕ್ಕೆ ನಾಲ್ಕೂ ದಿಕ್ಕಿನಲ್ಲಿಯ ಪ್ರವೇಶ ದ್ವಾರಗಳೂ ತೋರಣಗಳೂ ಇರುತ್ತವೆ. ಕಟಾಂಜನದ ವೇದಿಕೆ ಉಷ್ಣೀಶ, ಸೂಚಿಗಳು, ತೋರಣಗಳ ಮೇಲಿನ ಹೂಬಳ್ಳಿಗಳು, ಪದ್ಮಗಳು, ಬಗೆಬಗೆಯ ಪ್ರಾಣಿಗಳು, ಹಲವು ಬಗೆಯ ಮಾನಾವಾಕೃತಿಗಳು, ಜಾತಕ ಕಥೆಗಳು- ಮುಂತಾದ ಶಿಲ್ಪಗಳು ಭಾವಪೂರ್ಣವಾಗಿ, ಸುಂದರವಾಗಿ ತೆಳುವುಬ್ಬಿನವಾದ್ದು ಜಗತ್ಪ್ರಸಿದ್ಧವಾಗಿವೆ. ಕ್ರಿ.ಪೂ 3ನೆಯ ಶತಮಾನದಿಂದ ಕ್ರಿ.ಶ. 5-6ನೆಯ ಶತಮಾನದವರೆಗೂ ನಿರ್ಮಾಣಗೊಂಡ ನೂರಾರು ಸ್ತೂಪಗಳನ್ನು ನಾನಾ ಭಾಗಗಳಲ್ಲಿ ಕಾಣಬಹುದು. ಸಾಂಚಿ, ಬರ್‍ಹೂತ್, ಅಮರಾವತಿ, ಭಟ್ಟಿಪ್ರೋಲು, ನಾಗಾರ್ಜುನಗೊಂಡ ಮೊದಲಾದ ಕಡೆ ಇರುವ ಸ್ತೂಪಗಳು ಪ್ರಸಿದ್ಧವಾಗಿವೆ. ಈ ಸ್ತೂಪಗಳ ಜೊತೆಯಲ್ಲಿಯೇ ಹಲವಾರು ಕಡೆ ಬೌದ್ಧ ಸನ್ಯಾಸಿಗಳ ವಾಸಕ್ಕಾಗಿ ವಿಹಾರಗಳನ್ನು ಕಟ್ಟಿಸಿರುವುದುಂಟು. ಹಿಂಭಾಗದಲ್ಲಿ ಅರ್ಧ ವರ್ತುಲಾಕಾರವಾಗಿರುವ ಆಯತಾಕಾರದ ಈ ಕಟ್ಟಡಗಳೂ ಸಾಮಾನ್ಯವಾಗಿ ಇಟ್ಟಿಗೆಯವೇ, ಜಿನ ಪ್ರಾಸಾದಗಳೂ ಮೊದಲು ಸ್ತೂಪದಾಕಾರದಲ್ಲಿಯೇ ಇದ್ದುವೆಂಬುದು ಮಧುರೆಯಲ್ಲಿ ದೊರೆತಿರುವ ಅವಶೇಷಗಳಿಂದ ತಿಳಿದುಬರುತ್ತದೆ. ಆದರೆ ಜೈನರ ಯಾವ ಸ್ತೂಪಗಳೂ ಈಗ ಉಳಿದು ಬಂದಿಲ್ಲ.

	ಸ್ತೂಪಗಳ ನಿರ್ಮಾಣಗಳ ಜೊತೆಯಲ್ಲಿಯೇ ಗುಹಾವಸ್ತುವೂ ಬೆಳೆದು ಬಂತು. ಬಹುಶಃ ಮೊದಲು ಸ್ವಾಭಾವಿಕ ಗುಹೆಗಳಲ್ಲಿ ಬೌದ್ಧ ಸನ್ಯಾಸಿಗಳು ವಾಸಿಸುತ್ತಿದ್ದು ಅವರ ಅನುಕೂಲಕ್ಕಾಗಿ ಅವುಗಳನ್ನು ಸಜ್ಜುಗೊಳಿಸಲಾಗುತ್ತಿತ್ತು. ಆದರೆ ಮುಂದೆ ಬೆಟ್ಟಗಳ ಪಾಶ್ರ್ವಗಳಲ್ಲಿನ ಬಂಡೆಗಳನ್ನೇ ಕೊರೆದು ಆಲಯಗಳನ್ನು ನಿರ್ಮಿಸಲಾರಂಭಿಸಿದರು. ಮೌರ್ಯ ಅಶೋಖನ ಕಾಲದಲ್ಲಿಯೇ ಆರಂಭವಾದ ಈ ಗುಹಾವಸ್ತು ನಿರ್ಮಾಣ ಮುಂದೆ ಹೇರಳವಾಗಿ ಬೆಳೆಯಿತು. ಕ್ರಿ.ಶ. 7-8ನೆಯ ಶತಮಾನದ ವರೆಗೂ ಬೆಳೆದು ಬಂದ ಈ ಗುಹಾ ಶೈಲಿಯನ್ನು ಬೌದ್ಧರಲ್ಲದೆ ಜೈನರೂ ವೈದಿಕ ಪಂಥದವರೂ ತಮ್ಮ ದೇವಾಲಯಗಳಿಗೆ ಅಳವಡಿಸಿಕೊಂಡಿದ್ದಾರೆ. ಅತ್ಯಂತ ಪ್ರಾಚೀನವಾದ ಬರಾಬರ್ ಗುಹೆಗಳು ನಾಸಿಕದ ಸುತ್ತಮುತ್ತಲ ಕಾರ್ಲೆ ಭಾಜ ಮೊದಲಾದಡೆ ಇರುವ ಗುಹೆಗಳು ಆಳವಾಗಿದ್ದು ಎರಡು ಸಾಲು ದಪ್ಪ ಕಂಬಗಳಿಂದ ಮಧ್ಯಾಂಕಣ ಮತ್ತು ಇಕ್ಕೆಲದ ಹಜಾರಗಳುಂಟಾಗಿ ಮಧ್ಯಾಂಕಣದ ಹಿಂಭಾಗದಲ್ಲೇ ವರ್ತುಲಾಕಾರವೂ ಇರುತ್ತವೆ. ಗುಹೆಯ ಮುಖದಲ್ಲಿ ಪ್ರವೇಶದ್ವಾರವೂ ಅದನ್ನು ಬಳಸಿಕೊಂಡಂತೆ ಮೇಲ್ಭಾಗದಲ್ಲಿರುವ ದೊಡ್ಡದಾದ ಲಾಳಾದಾಕಾರದ ಕಮಾನು ಅಲಂಕರಣಗಳಿಂದ ಕೂಡಿದೆ. ಈ ಎಲ್ಲ ಕಂಡರಣೆಗಳೂ ಮರದಿಂದ ನಿರ್ಮಿಸಿದ ಕಟ್ಟಡಗಳ ಕಂಡರಣೆಯನ್ನು ಹೋಲುವುದೊಂದು ವಿಶೇಷ. ಮುಂದೆ ಗುಹೆಗಳು ವಿಶಾಲವಾದುವಲ್ಲದೆ ಅಂತಸ್ತುಗಳಲ್ಲಿಯೂ ನಿರ್ಮಾಣವಾದುವು. ಗೋಡೆಗಳ ಪಕ್ಕದಲ್ಲಿ ಬೌದ್ಧ ಸಂನ್ಯಾಸಿಗಳು ವಿಶ್ರಮಿಸುವ ಜಗತಿಗಳೂ ಹಿಂಭಾಗದಲ್ಲಿ ಸೂಪ್ತದ ಗುಡಿಯೂ ಇರುವುದುಂಟು. ಹೀನಯಾನ ಪಂಥದ ಇಂಥ ಗುಹಾಂತರ್ದೇವಾಲಯಗಳು ಸರಳವಾದುವು. ಆದರೆ ಮಹಾಯಾನ ಪಂಥದವರು ಅವನ್ನು ಹೆಚ್ಚು ಅಂದಗೊಳಿಸಿದರು. ಮೂರ್ತಿಗಳನ್ನು ಕೊರೆಯುವುದು, ವಿಶಾಲವಾಗುವುದು, ಚಿತ್ರ ಬಿಡಿಸುವುದು ಇವುಗಳಲ್ಲಿ ಕಂಡುಬರುತ್ತದೆ. ಎರಡು ಮೂರು ಅಂತಸ್ತುಗಳಲ್ಲಿ ಈ ಗುಹಾಲಯಗಳಿರುವುದೂ ಉಂಟು. ಒಂದೊಂದು ಕಡೆಯೂ ಗುಂಪುಗುಂಪಾಗಿ ಬೆಟ್ಟಗಳ ಪಕ್ಕಗಳಲ್ಲಿ ಗುಹಾಲಯಗಳನ್ನು ಕೊರೆದಿದ್ದಾರೆ. ಬೌದ್ಧ ಮತ ಕ್ಷೀಣಿಸುತ್ತ ಇದ್ದಂತೆಯೇ ವೈದಿಕ ಧರ್ಮದ ಗುಹೆಗಳೂ ಜೈನ ಗುಹೆಗಳೂ ನಿರ್ಮಾಣವಾದುವು. ಎಷ್ಟೋ ವೇಳೆ ಬೌದ್ಧ ಗುಹೆಗಳನ್ನು ಮಾರ್ಪಡಿಸಿ ಜೈನ ಅಥವಾ ವೈದಿಕ ಗುಹೆಗಳನ್ನಾಗಿಸಿರುವುದೂ ಉಂಟು. ಉದಯಗಿರಿ ಖಂಡಗಿರಿಗಳಲ್ಲಿ ಇಂಥ ಬದಲಾವಣೆ ಕಾಣಬಹುದು. ಎಲ್ಲೋರ ಔರಂಗಾಬಾದುಗಳಲ್ಲಿ ಬೌದ್ಧ ಜೈನ ವೈದಿಕ ಗುಹೆಗಳನ್ನು ಅಕ್ಕಪಕ್ಕಗಳಲ್ಲಿಯೇ ಕೊರೆದಿದ್ದಾರೆ. ಸಾಮಾನ್ಯ ವಿನ್ಯಾಸದಲ್ಲಿ ಇವು ಒಂದೇ ರೀತಿಯಲ್ಲಿದ್ದರೂ ಆಯಾ ಪಂಥದ ಮೂರ್ತಿ ಶಿಲ್ಪಗಳಿರುವುದನ್ನೂ ಒಳರಚನೆಯಲ್ಲಿ ಕೆಲವು ವ್ಯತ್ಯಾಸಗಳಿರುವುದನ್ನೂ ಗಮನಿಸಬಹುದು. ಗುಹಾಲಯಗಳಲ್ಲಿ ಅತ್ಯಂತ ಪ್ರಸಿದ್ಧವಾದುವು ಅಜಂತ, ಎಲ್ಲೋರಗಳಲ್ಲಿರುವುವು. ಕ್ರಿ. ಪೂ. 2 ನೆಯ ಶತಮಾನದಿಂದ ಕ್ರಿ. ಶ. 7 ನೆಯ ಶತಮಾನದ ವರೆಗೆ 900 ವರ್ಷಗಳ ಕಾಲ ಬೆಳೆದುಬಂದ ಈ ಗುಹಾಲಯಗಳಲ್ಲಿನ ವಾಸ್ತುವಿನ ಬೆಳೆವಣಿಗೆ, ಮೂರ್ತಿಶಿಲ್ಪ, ಚಿತ್ರಗಳ ಸೊಗಸು ಗಮನಾರ್ಹ.

ಗುಪ್ತರ ಕಾಲಕ್ಕೆ ದೇವಾಲಯಗಳನ್ನು ನಿರ್ಮಿಸುವಲ್ಲಿ ಒಂದು ಹೊಸ ಮಜಲು ಆರಂಭವಾಯಿತು. ಒಂದೇ ಗಾತ್ರದಲ್ಲಿ ಕತ್ತರಿಸಿ ನಯಗೊಳಿಸಿದ ಕಲ್ಲಿನ ತುಂಡುಗಳನ್ನು ಜೋಡಿಸಿ ದೇವಾಲಯಗಳನ್ನು ಕಟ್ಟುವ ಪದ್ಧತಿ ಬೆಳಕಿಗೆ ಬರಲಾರಂಭಿಸಿತು. ಮೊದಲು ಈ ಕಟ್ಟಡಗಳ ಗೋಡೆಗಳು, ಕಂಬಗಳು ಸ್ಥೂಲವಾಗಿದ್ದುದರಿಂದ ಇವುಗಳಲ್ಲಿ ಗುಹಾ ದೇವಾಲಯಗಳ ಅನುಕರಣೆ ಕಾಣಬಹುದು. ವೈದಿಕಧರ್ಮ ಒದಗಿದಪ್ರೋತ್ಸಾಹ, ಪೌರಾಣಿಕ ದೇವತೆಗಳಿಗೆ ಬಂದ ಪ್ರಾಶಸ್ತ್ಯ ದೇವಾಲಯಗಳ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದುವು. ಆರಂಭದ ದೇವಾಲಯಗಳಲ್ಲಿ ಗರ್ಭಗೃಹ, ಮುಖಮಂಟಪಗಳು ಮಾತ್ರ ಇರುತ್ತಿದ್ದುವು. ಅವು ಚೌಕತಲ ವಿನ್ಯಾಸ, ಹಾಗೂ ಸರಳ ರಚನೆಗಳಿಂದ ಕೂಡಿರುತ್ತಿದ್ದುವು. ಅನಂತರದ ಸುಂದರಾಕೃತಿಯ ಕಂಬಗಳನ್ನು ಜೋಡಿಸಿದ ದೊಡ್ಡ ಮಂಟಪಗಳು ಅವಕ್ಕೆ ಸೇರಿಕೊಂಡವು. ಚಪ್ಪಟೆಯಾಗಿದ್ದ ಗರ್ಭಗೃಹದ ಮೇಲ್ಚಾವಣಿಯ ಮೇಲೆ ಶಿಖರಗಳು ನಿರ್ಮಿತವಾದವು. ದೇವಘಡದ ದಶಾವತಾರ ದೇವಾಲಯ, ಭ್ರೂಮದ ಶಿವದೇವಾಲಯ ಏರಣದ ವಿಷ್ಣು ಮತ್ತು ವರಾಹ ದೇವಾಲಯಗಳು ಈ ಆರಂಭಕಾಲದ ದೇವಾಲಯಗಳಿಗೆ ಉತ್ತಮ ಉದಾಹರಣೆಗಳು. ಮುಂದೆ ಈ ದೇವಾಲಯಗಳ ಶೈಲಿ ವಿಸ್ತøತಗೊಂಡು ಔತರೇಯ ಅಥವಾ ನಾಗರಶೈಲಿ ಎನ್ನಿಸಿಕೊಂಡಿತು. ಈ ಶೈಲಿಯ ದೇವಾಲಯಗಳಲ್ಲಿ ಗರ್ಭಗೃಹ, ಅದರ ಮೇಲೆ ನೇರವಾಗಿ ಅದರ ಮೇಲೆ ಮೇಲೆದ್ದು ಕೊನೆಯಲ್ಲಿ ಒಳಕ್ಕೆ ಬಾಗುವ, ಮೇಲೆ ಆಮಲಕ, ಕಲಶಗಳನ್ನು ಹೊಂದಿದ ಬೃಹದ್ಗಾತ್ರದ ವಿಮಾನ, ಮುಂದೆ ಹಲವು ಮುಖಗಳುಳ್ಳ ಉನ್ನತ ಭುವನೇಶ್ವರಿಯನ್ನು ಹೊಂದಿದ ಜಗಮೋಹನ, ಅದರ ಮುಂದೆ ಪ್ರತ್ಯೇಕವಾದ ನಟಮಂದಿರ, ಸುತ್ತಲೂ ಪ್ರಾಕಾರ ಇದ್ದು ದೇವಾಲಯದ ಗೋಡೆಗಳು ದೇವ, ಮಾನವ ಸಂಸಾರಿಕ, ಸಾಮಾಜಿಕ ಶಿಲ್ಪಗಳಿಂದ ತುಂಬಿಹೋಗಿರುತ್ತವೆ. ಚಂದೇಲರು ಈ ಶೈಲಿಯ ಬೃಹದ್ಗಾತ್ರದ ದೇವಾಲಯಗಳನ್ನು ಕಟ್ಟಿಸಿರುವವರಲ್ಲಿ ಪ್ರಸಿದ್ಧರು. ಕೋಣಾರ್ಕ, ಭುವನೇಶ್ವರಗಳಲ್ಲಿ ಈ ದೇವಾಲಯಗಳು ಪ್ರಸಿದ್ಧವಾಗಿರುವಂತೆ ಘನೇರಾಂನ ಮಹಾವೀರ ದೇವಾಲಯ ಓಸಿಯಾದ ರಾಜಸ್ಥಾನ್ ವಾಸ್ತುಶೈಲಿಯ ಬಸದಿ, ಗ್ಯಾರಸ್‍ಪುರದ ಮಾಲಾದೇವಿ ದೇವಾಲಯಗಳು, ಖಜರಾಹೋ ದೇವಾಲಯಗಳು ಜಿನ ಮಂದಿರಗಳಾಗಿದ್ದು ಒಂದೊಂದು ಶಿಲ್ಪಭಂಡಾರವಾಗಿವೆ. ಈ ಮಂದಿರಗಳ ಪ್ರತಿಯೊಂದು ಭಾಗವೂ ಶಿಲ್ಪಾಲಂಕರಣಗಳಿಂದ ಕೂಡಿದ್ದು ಹೊರಗೋಡೆಗಳ ಸಾಲು ಸಾಲು ಮೂರ್ತಿಗಳು ಆಕರ್ಷಕವಾಗಿವೆ. ಅನೇಕ ದೇವಾಲಯಗಳು ನಾಶವಾಗಿದ್ದರೂ ಹಲವು ನೂರು ದೇವಾಲಯಗಳು ಉಳಿದುಬಂದಿದ್ದು ದೇವಾಲಯಗಳ ನಿರ್ಮಾಣದಲ್ಲಿ ಆಗಿನ ರಾಜರು ಮತ್ತು ಜನತೆಗಿದ್ದ ಅಪಾರ ಶ್ರದ್ಧೆಯನ್ನು ವ್ಯಕ್ತಪಡಿಸುತ್ತವೆ.

ಬೆಟ್ವಗಳನ್ನು ಕೊರೆದು ಗುಹಾದೇವಾಲಯಗಳನ್ನು ರಚಿಸಿದಂತೆ ಬಂಡೆಗಳನ್ನೇ ಕಂಡರಿಸಿ ಬೆಟ್ಟಗಳನ್ನೇ ಕೊರೆದು ಏಕಶಿಲಾದೇವಾಲಯಗಳನ್ನೂ ನಿರ್ಮಿಸಿರುವುದು ದಕ್ಷಿಣದಲ್ಲಿ ಕಂಡುಬಂದಿದೆ. ಇದನ್ನು ಆರಂಭಿಸಿದವರು ಪಲ್ಲವರು. ಮಹಾಬಲಿಪುರದಲ್ಲಿನ ಪಂಚರಥಗಳು ಹೀಗೆ ಬಂಡೆಗಳನ್ನು ಕಂಡರಿಸಿ ನಿರ್ಮಿಸಿರುವ ದೇವಾಲಯಗಳು. ದ್ರಾವಿಡ ಶೈಲಿಗೆ ಮೂಲವಾದ ಈ ದೇವಾಲಯಗಳನ್ನು ನಿರ್ಮಿಸಿದವ ಪಲ್ಲವ ನರಸಿಂಹವರ್ಮ. ಏಕಶಿಲಾದೇವಾಲಯಗಳಲ್ಲೇ ಅದ್ಭುತವಾದುದು ಎಲ್ಲೋರದ ಕೈಲಾಸದೇವಾಲಯ. ದೊಡ್ಡಕಲ್ಲಿನ ಮೊರಡಿಯನ್ನು ಕತ್ತರಿಸಿ ದೊಡ್ಡ ಪ್ರಮಾಣದಲ್ಲಿ ನಿರ್ಮಿಸಿರುವ ದ್ರಾವಿಡ ಶೈಲಿಯ ಈ ದೇವಾಲಯ ಅಮೋಘವಾದುದು. ದ್ರಾವಿಡ ಶೈಲಿಯ ಶಿಲಾನಿರ್ಮಿತ ದೇವಾಲಯಗಳಲ್ಲಿ ಪ್ರಾಚೀನವಾದುದು ಮಹಾಬಲಿಪುರದಲ್ಲಿ ಸಮುದ್ರದ ದಡದಲ್ಲಿರುವ ದೇವಾಲಯ. ಸ್ಥೂಲ ಶಿಲೆಗಳಿಂದ ನಿರ್ಮಿತವಾಗಿರುವ ಅದರ ನೀಳವಾದ ವಿಮಾನ ವಿಶಿಷ್ಟವಾದುದು. ದಕ್ಷಿಣದಲ್ಲಿ ಪ್ರಚಾರಕ್ಕೆ ಬಂದ ದ್ರಾವಿಡ ಶೈಲಿಯ ದೇವಾಲಯಗಳು ಚೌಕವಿನ್ಯಾಸವುಳ್ಳವು; ಗರ್ಭಗುಡಿಯ ಮೇಲಿನ ವಿಮಾನ ಹಂತ ಹಂತವಾಗಿ ಮೇಲೇರುವ ಪಿರಿಮಿಡಾಕೃತಿಯದು. ಪಲ್ಲವರ ಕಾಲದ ದೇವಾಲಯಗಳಲ್ಲಿ ಸಿಂಹಸ್ತಂಭಗಳಿರುವುದೊಂದು ವೈಶಿಷ್ಟ್ಯ. ಮೊದಲಿನ ದೇವಾಲಯಗಳಲ್ಲಿ ಗರ್ಭ ಗೃಹ, ಮೇಲೆ ಒಂದೇ ಅಂತಸ್ತಿನ ಚೌಕ ಅಥವಾ ಅಷ್ಟಕೋನ ಶಿಖರ, ಮುಂದೆ ಕಿರುಮಂಟಪ ಮಾತ್ರ ಇರುತ್ತಿದ್ದುವು. ಅವಕ್ಕೆ ನಾಲ್ಕು ಕಡೆಯೂ ಉಪದೇವತೆಗಳ ಕಿರುಗುಡಿಗಳಿರುವುದುಂಟು. ಇಟ್ಟಿಗೆಯಿಂದ ನಿರ್ಮಿತವಾದ ದೇವಾಲಯಗಳೂ ಈ ಕಾಲದಲ್ಲಿ ಹೆಚ್ಚು. ಮುಂದೆ ಚೋಳರು ದ್ರಾವಿಡ ಶೈಲಿಯ ದೇವಾಲಯ ನಿರ್ಮಾಣವನ್ನು ವಿಸ್ತಾರವಾಗಿ ಬೆಳೆಸಿದರು. ಗರ್ಭಗೃಹ, ಅರ್ಧ ಮಂಟಪ, ಸುತ್ತಲ ಉಪದೇವತಾ ಮಂದಿರಗಳು, ಕಲ್ಯಾಣಮಂಟಪ ಹಾಗೂ ಸುತ್ತುವರಿದ ಪ್ರಾಕಾರಗಳಿರುವ ಚೋಳರ ಕಾಲದ ಸಹಸ್ರಾರು ದೇವಾಲಯಗಳಲ್ಲಿ ತಂಜಾವೂರಿನಲ್ಲಿ ರಾಜರಾಜ ಕಟ್ಟಿಸಿದ ರಾಜರಾಜೇಶ್ವರ ದೇವಾಲಯ ಮತ್ತು ಗಂಗೈಕೊಂಡ ಚೋಳಪುರದಲ್ಲಿ ಒಂದನೆಯ ರಾಜೇಂದ್ರಚೋಳ ಕಟ್ಟಿಸಿದ ಗಂಗೈಕ್ಕೊಂಡ ಜೋಳೇಶ್ವರ ದೇವಾಲಯಗಳು ಈ ಶೈಲಿಯಲ್ಲೇ ಉತ್ತುಂಗ ಶಿಖರಗಳು. ಮುಂದೆ ವಿಜಯ ನಗರದ ಅರಸರು, ಮಧುರೆಯ ನಾಯಕರು ದೇವಾಲಯಗಳ ರಚನೆಯನ್ನು ವಿಸ್ತøತಗೊಳಿಸಿದರು. ಕ್ರಮೇಣ ದೇವಾಲಯಗಳಿಗೆ ಹಲವು ಪ್ರಾಕಾರಗಳು ನಿರ್ಮಿತವಾಗಿ ಇಡೀ ಊರನ್ನೇ ಒಳಗೊಳ್ಳುವಂತಾಯಿತು. ಮೂಲದೇವಾಲಯಕ್ಕಿಂತ ಪ್ರಾಕಾರದ ಮಹಾದ್ವಾರಗಳಿಗೆ ಪ್ರಾಶಸ್ತ್ಯ ಬಂತು. ಅವುಗಳ ಗೋಪುರಗಳು ಅತ್ಯುನ್ನತವಾದುವು. ದೇವಾಲಯದ ಮುಂದೆ ಸಹಸ್ರಕಂಬಗಳ ಮಂಟಪಗಳುಂಟು. ಮೂಲದೇವಾಲಯಕ್ಕೆ ಹೋಗಬೇಕಾದರೆ ಹಲವು ಬೃಹದ್ಗೋಪುರಗಳುಳ್ಳ ಮಹಾದ್ವಾರಗಳನ್ನು ದಾಟಿಹೋಗಬೇಕು. 

ಕೇರಳ ಹಾಗೂ ಕರಾವಳಿ ಪ್ರದೇಶಗಳಲ್ಲಿ ಸ್ಥಳೀಯ ರೀತಿಯಲ್ಲಿ ನಿರ್ಮಿಸಿದ ದೇವಾಲಯಗಳುಂಟು. ವಿಶಾಲವಾದ ಪ್ರದೇಶದಲ್ಲಿ ಒಂದು ಅಥವಾ ಹೆಚ್ಚು ಪ್ರಾಕಾರಗಳ ಮಧ್ಯದಲ್ಲಿ ಹೆಚ್ಚು ಎತ್ತರವಿಲ್ಲದ್ದು ಶ್ರೀಕೋಯಿಲ್. ಇದರ ಅಧಿಷ್ಠಾನ ಕಲ್ಲಿನದು. ಮೇಲಿನ ಭಿತ್ತಿ ಜಂಬುಕಲ್ಲಿನದು. ಗೋಡೆಗಳ ಮೇಲೆ ವರ್ಣಚಿತ್ರಗಳ ಅಲಂಕರಣ ಇರುವುದುಂಟು. ಮೇಲ್ಛಾವಣಿ ಮರದ್ದು. ಅದಕ್ಕೆ ತಾಮ್ರದ ತಗಡಿನ ಅಥವಾ ಹಂಚಿನ ಹೊದಿಕೆ. ಮೂಲ ಗುಡಿ ಚೌಕ, ಚೈತ್ಯಾಕೃತಿ ಅಥವಾ ವೃತ್ತಾಕಾರದ ತಟವಿನ್ಯಾಸವನ್ನು ಹೊಂದಿರುತ್ತದೆ. ಚಾವಣಿಗಳು ಹೆಚ್ಚು ಇಳಿಜಾರಾಗಿದ್ದು ಒಂದು ಅಥವಾ ಎರಡು ಘಟ್ಟಗಳಲ್ಲಿ ಮೇಲೇರಿಸುವುದುಂಟು. ನೇಪಾಳದ ತರಾಯಿಗಳ ಮಾದರಿಯನ್ನು ಈ ಗುಡಿಗಳಲ್ಲಿ ಮುಸ್ಲಿಂ ಶೈಲಿಯ ಅನುಕರಣೆಯಿದ್ದು ಕೆಲವನ್ನಂತೂ ಅವುಗಳ ಮೇಲಿನ ಕಲಶದಿಂದ ಮಾತ್ರ ದೇವಾಲಯಗಳೆಂದು ಗುರುತಿಸಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಇಲ್ಲಿನ ದೇವಾಲಯಗಳಲ್ಲಿ ಲ್ಯಾಟಿನ್ ವಾಸ್ತುಶೈಲಿಯ ಪ್ರಭಾವವನ್ನು ವಿಶೇಷವಾಗಿ ಕಾಣಬಹುದು. ಇದರೊಂದಿಗೆ ಗೋವ ಮಹಾರಾಷ್ಟ್ರಗಳ ಈಚಿನ ದೇವಾಲಯಗಳ ಮುಂದೆ ಭವ್ಯವಾಗಿ ಹಲವು ಅಂತಸ್ತುಗಳಲ್ಲಿ ನೇರವಾಗಿ ಮೇಲೆದ್ದಿರುವ ಗೋಪುರಗಳು ವಿಶಿಷ್ಟವಾದವು. 

ಕರ್ನಾಟಕದಲ್ಲಿ ದೇವಾಲಯಗಳ ರಚನೆ ಒಂದು ಉತ್ತಮ ಪರಂಪರೆಯೇ ಇದೆ. ಹಲವು ಮತಧರ್ಮಗಳಿಗೆ ತವರೂ ಆಶ್ರಯಸ್ಥಾನವೂ ಆಗಿದ್ದ ಕರ್ನಾಟಕದಲ್ಲಿ ಹಲವು ಮತಗಳನ್ನಾಧರಿಸಿ ಕಟ್ಟಿದ ದೇವಾಲಯಗಳು ಉದ್ದಗಲಕ್ಕೂ ಹರಡಿವೆ. ಜೊತೆಗೆ ಆಯಾ ಭಾಗಗಳಲ್ಲಿ ದೊರೆವ ಮೂಲ ಸಾಮಗ್ರಿಗಳನ್ನಾಧರಿಸಿ ದೇವಾಲಯಗಳ ಶೈಲಿ ಬೆಳೆದಿದೆ. ಇದರೊಂದಿಗೆ ಭಾರತದಲ್ಲಿ ಕರ್ನಾಟಕ ಆಯಕಟ್ಟಿನ ನೆಲೆಯಲ್ಲಿರುವುದರಿಂದ ಇಲ್ಲಿ ಔತ್ತರೇಯ ನಾಗರ ಶೈಲಿಯೂ ದಾಕ್ಷಿಣಾತ್ಯ ದ್ರಾವಿಡ ಶೈಲಿಯೂ ಸಂಗಮಿಸಿ ಬೆಳೆದುವಲ್ಲದೆ ಕಾಲಕ್ರಮದಲ್ಲಿ ಆ ಸಮ್ಮಿಲನದಿಂದ ಕೆಲವು ವಿಶಿಷ್ಟ ಶೈಲಿಗಳೂ ಹುಟ್ಟಿಕೊಂಡವು.

ಸ್ತೂಪ ಮತ್ತು ಚೈತನ್ಯಗಳು ಈಗ ಕರ್ನಾಟಕದಲ್ಲಿ ಯಾವುವೂ ಪೂರ್ಣ ರೂಪದಲ್ಲಿ ಉಳಿದುಬಂದಿಲ್ಲವೆಂದು ಇದ್ದರೂ ಅವುಗಳ ಅವಶೇಷಗಳನ್ನು ಸನ್ನತಿ, ಬ್ರಹ್ಮಗಿರಿ, ಬನವಾಸಿಗಳಲ್ಲಿ ಕಾಣಬಹುದು. ಸನ್ನತಿಯಲ್ಲಿ ಸ್ತೂಪದ ವೃತ್ತಾಕಾರದ ತಲವಿನ್ಯಾಸ ಅದರ ಸುತ್ತಿನ ಕೆಲವು ಶಿಲ್ಪಫಲಕಗಳು ಅದರ ಮೂಲರಚನೆಯ ಸೂಚನೆಯನ್ನು ಕೊಡುತ್ತವೆ. ಹಾಗೆಯೇ ಬನವಾಸಿಯಲ್ಲಿ ಇಟ್ಟಿಗೆಯಿಂದ ನಿರ್ಮಿತವಾಗಿದ್ದ ದೇವ ಗೃಹಗಳು ಎರಡು ಅಥವಾ ಮೂರು ವಲಯಗಳಲ್ಲಿದ್ದು ಹಿಂಭಾಗ ಅರೆಗೋಲಾಕಾರವಾಗಿದ್ದು ವಲಯಗಳ ನಡುವೆ ಪ್ರದಕ್ಷಿಣಾಪಥ ಇದ್ದುದನ್ನು ಗುರುತಿಸಬಹುದು. ಐಹೊಳೆಯಲ್ಲಿ ಎರಡು ಬಾದಾಮಿಯಲ್ಲಿ ನಾಲ್ಕು ಗುಹಾಂತರ್ದೇವಾಲಯಗಳು ಇವೆ. ಬಾದಾಮಿಯ ನಾಲ್ಕೂ ಗುಹೆಗಳು ಒಂದೇ ವಿನ್ಯಾಸದಲ್ಲಿದ್ದು ಒಂದು ಚಿಕ್ಕಗರ್ಭಗುಡಿ, ದಪ್ಪ ಕಂಬಗಳಿಂದ ಕೂಡಿದ ಹಜಾರ ಮೊಗಸಾಲೆ ಹಾಗೂ ಭವ್ಯವಾದ ಮೂರ್ತಿ ಶಿಲ್ಪಗಳಿಂದ ಕೂಡಿದೆ. ಬಹುಶ: ಈಗ ತಿಳಿದಿರುವ ಮಟ್ಟಿಗೆ ಅತ್ಯಂತ ಪ್ರಾಚೀನವಾದ ಕಲ್ಲು ಕಟ್ಟಡವೆಂದರೆ ಹಲಸಿಯ ಜೈನಬಸದಿ. ಯಾವ ರೀತಿಯ ಅಲಂಕರಣವೂ ಇಲ್ಲದಿರುವ ಉರುಟುಕಲ್ಲುಗಳನ್ನು ಪೇರಿಸಿ ಕಟ್ಟಿರುವ ಈ ದೇವಾಲಯದಲ್ಲಿ ಸುಕನಾಸಿ ಗರ್ಭಗೃಹಕ್ಕಿಂತ ದೊಡ್ಡದು. ಗಂಗರು ನೊಳಬರು ದ್ರಾವಿಡ ಶೈಲಿಯನ್ನೇ ಅಳವಡಿಸಿಕೊಂಡು ಅನೇಕ ದೇವಾಲಯ ಹಾಗೂ ಬಸದಿಗಳನ್ನು ಕಟ್ಟಿಸಿದ್ದಾರೆ. ಇದರೊಂದಿಗೆ ಚೋಳರೂ ತಾವು ಆಕ್ರಮಿಸಿಕೊಂಡಿದ್ದ ಕರ್ನಾಟಕದ ಭಾಗಗಳಲ್ಲಿ ಮಧ್ಯಮ ಪ್ರಮಾಣದ ಮತ್ತು ಸಣ್ಣ ಪ್ರಮಾಣದ ನೂರಾರು ದೇವಾಲಯಗಳನ್ನು ಕಟ್ಟಿಸಿದ್ದಾರೆ. ಆದರೆ ದೇವಾಲಯಗಳ ರಚನೆಯ ಬಗೆಗೆ ಹಲವಾರು ಪ್ರಯೋಗಗಳು ನಡೆದುದು ಬಾದಾಮಿ ಚಾಳುಕ್ಯರ ಕಾಲದಲ್ಲಿ ಅವರ ರಾಜಧಾನಿಯಾಗಿದ್ದ ಐಹೊಳೆ, ಪಟ್ಟದಕಲ್ಲು, ಬಾದಾಮಿಗಳಲ್ಲಿ, ಮೊದಲು ಗುಹಾಶಿಲ್ಪವನ್ನಾಧರಿಸಿ ಕೇವಲ ದೀರ್ಘ ಚತುರಸ್ರಾಕಾರದ ಮಂಟಪದ ನಿರ್ಮಾಣವಾಗಿದ್ದು ದಪ್ಪಕಂಬಗಳ ಈ ಮಂಟಪದ ನಡುವಣ ಅಂಕಣವನ್ನು ಆ ಮೇಲೆ ಮುಚ್ಚಿ ಗರ್ಭಗುಡಿಯಾಗಿ ಪರಿವರ್ತಿಸಲಾಗಿದೆ. ಅನಂತರ ದೊಡ್ಡ ಹಜಾರ, ಅದರ ಹಿಂದಿನ ಅಂಕಣವನ್ನು ಗರ್ಭಗುಡಿಯಾಗಿ ಮಾರ್ಪಡಿಸಿ ಮುಂದೆ ಮೂರಂಕಣದ ಮುಖಮಂಟಪವನ್ನು ರಚಿಸಿರುವ ಲಾಡ್‍ಖಾನ್ ದೇವಾಲಯದ ಮುಂದಿನ ಹಂತ. ಇದರ ನಡುವಣ ಅಂಕಣದ ಮೇಲೆ ಒಂದು ಮೇಲಂತಸ್ತಿನ ಗುಡಿ ಇದೆ. ಗುಜ್ಜ ಮತ್ತು ದಪ್ಪ ಚೌಕ ಕಂಬಗಳ ಮೇಲೆ ನಿರ್ಮಿತವಾಗಿರುವ ಈ ದೇವಾಲಯಗಳು ಶಿಲಾನಿರ್ಮಿತ ದೇವಾಲಯಗಳ ಮೊದಲ ಪ್ರಯತ್ನಗಳು. ಬೌದ್ಧರ ಚೈತ್ಯಾಲಯಗಳಂತೆ ಅರ್ಧವರ್ತುಲಾಕಾರವಾದ ಗರ್ಭಗುಡಿ, ಅದಕ್ಕೆ ಸೇರಿದಂತೆ ಆಯಾಕಾರದ ಮಂಟಪ, ಇವೆರಡಕ್ಕೂ ಹೊಂದಿಕೊಂಡಂತೆ ಪ್ರದಕ್ಷಿಣಾಪಥ, ಮುಂಭಾಗದಲ್ಲಿ ಮುಖಭದ್ರ, ಗರ್ಭಗುಡಿಯ ಮೇಲೆ ಔತ್ತರೇಯ ಪದ್ಧತಿಯ ಗೋಪುರ - ಇವನ್ನು ಹೊಂದಿದ ದುರ್ಗದ ಗುಡಿ ಬೇರೆ ಬೇರೆ ಶೈಲಿಗಳ ಸಮ್ಮಿಶ್ರಣದ ಪ್ರಥಮ ಪ್ರಯತ್ನ. ಇದರಲ್ಲಿ ಗುಹಾಶೈಲಿ ಔತ್ತರೇಯ ನಾಗರಶೈಲಿ ಮತ್ತು ಬೌದ್ಧಚೈತ್ಯ ಶೈಲಿಗಳನ್ನು ಸ್ಥಳೀಯ ಶೈಲಿಯೊಂದಿಗೆ ಮೇಳವಿಸಿ ವಿನೂತನ ಶೈಲಿಯನ್ನು ಸೃಷ್ಟಿಸಿರುವಂತೆ ಕಂಡುಬರುತ್ತದೆ. ದೇವಾಲಯಗಳ ನಿರ್ಮಾಣದಲ್ಲಿ ಚಾಳುಕ್ಯರು ಹೊರಗಿನಿಂದ ಎರವಲು ತಂದ ವಾಸ್ತುಶೈಲಿಗಳಲ್ಲಿ ದಕ್ಷಿಣದ ದ್ರಾವಿಡ ಶೈಲಿ ಹೆಚ್ಚು ಬಳಕೆಗೆ ಬಂತು. ಬಾದಾಮಿಯಲ್ಲಿ ದೊಡ್ಡದಾದ ಕಲ್ಲಿನ ಮೊರಡಿಯ ಮೇಲೆ ನಿರ್ಮಿಸಿದ ಮಾಲೆಗಿತ್ತಿ ಶಿವಾಲಯ ದ್ರಾವಿಡ ಶೈಲಿಯ ಸ್ಥೂಲ ದೇವಾಲಯಗಳಿಗೆ ಒಂದು ಉತ್ತಮ ಉದಾಹರಣೆ. ಮಾಮಲ್ಲಪುರದ ರಥಗಳನ್ನು ನೆನಪಿಗೆ ತರುವ ಈ ದೇವಾಲಯ ಗುಹಾಶಿಲ್ಪದ ಕುರುಹುಗಳನ್ನೂ ಉಳಿಸಿಕೊಂಡಿದೆ. ವಿಜಯಾದಿತ್ಯ ವಿಕ್ರಮಾದಿತ್ಯರ ಕಾಲದಲ್ಲಿ ದ್ರಾವಿಡ ಶೈಲಿಯ ಹಲವಾರು ದೇವಾಲಯಗಳು ನಿರ್ಮಾಣಗೊಂಡುವು. ಇವುಗಳೊಂದಿಗೇ ನಾಗರಶೈಲಿಯ ಕಟ್ಟಡಗಳನ್ನೂ ಕಟ್ಟಿರುವುದು ಕಂಡುಬರುತ್ತದೆ. ಪಟ್ಟದಕಲ್ಲಿನಲ್ಲಿ ಈ ಎರಡು ಶೈಲಿಯ ದೇವಾಲಯಗಳನ್ನೂ ಜೊತೆಜೊತೆಯಾಗಿ ಕಟ್ಟಿರುವುದನ್ನು ನೋಡಬಹುದು. ಪಾಪನಾಥ, ಜಂಬುಲಿಂಗ, ಕರಿಸಿದ್ಧೇಶ್ವರ ಮತ್ತು ಕಾಶೀನಾಥ ದೇವಾಲಯಗಳು ಔತ್ತರೇಯ ರೀತಿಯಲ್ಲಿ ನೇರವಾಗಿ ಮೇಲೆದ್ದು ಕೊನೆಯಲ್ಲಿ ಒಳಕ್ಕೆ ಬಾಗುವ, ಮೇಲೆ ಅಮಲಕವನ್ನುಳ್ಳ ಶಿಖರಗಳನ್ನು ಹೊಂದಿದ್ದರೆ ಸಂಗಮೇಶ್ವರ, ಮಲ್ಲಿಕಾರ್ಜುನ ಮತ್ತು ಗಳಗನಾಥ ದೇವಾಲಯಗಳು ಅಂತಸ್ತುಗಳಾಗಿ ಮೇಲೇಳುವ ದ್ರಾವಿಡ ಶಿಖರಗಳನ್ನು ಹೊಂದಿವೆ.

ಕ್ರಮೇಣ ನಾಗರ ಮತ್ತು ದ್ರಾವಿಡ ಶೈಲಿಗಳ ಹಿತಮಿತ ಸಂಯೋಜನೆ ನಡೆದು ಕಲ್ಯಾಣದ ಚಾಲುಕ್ಯರು ಆಳಲಾರಂಭಿಸುವ ಹೊತ್ತಿಗೆ ವೇಸರ ಶೈಲಿ ಹುಟ್ಟಿಕೊಂಡಿತು. ದ್ರಾವಿಡ ರೀತಿಯ ಗೋಪುರ ರಚನೆಯ ಅಂತಸ್ತುಗಳನ್ನು ಉಳಿಸಿಕೊಂಡರೂ ಅವುಗಳ ಪ್ರಮಾಣ ಕಡಿಮೆಯಾಗಿ ಉತ್ತರದ ಲಂಬನಿಲವೂ ಸೇರಿಕೊಂಡಿತು. ಅಲಂಕರಣಗಳು ಹೆಚ್ಚಾದುವು. ಕೆಂಪುಮರಳುಶಿಲೆ ಬದಲು ಹಸಿರು ಬೆರೆತ ಕಪ್ಪು ಶಿಲೆಯನ್ನು ಉಪಯೋಗಿಸಿದುದರಿಂದ ಆ ಮಿದುಕಲ್ಲಿನಲ್ಲಿ ಬೃಹತ್ಪ್ರಮಾಣದ ಕಂಬತೊಲೆಗಳನ್ನು ಮಾಡುವುದು ಸಾಧ್ಯವಲ್ಲದ್ದರಿಂದ ದೇವಾಲಯಗಳ ಪ್ರಮಾಣ ಕಿರಿದಾಯಿತು. ಬಾಗಲುವಾಡಗಳೂ ಹೊರ ಗೋಡೆಗಳೂ ಶಿಲಾ ಅಲಂಕಾರಗಳಿಂದ ತುಂಬಿಹೋದವು. ದೇವಾಲಯಗಳ ಶಿಲಾವಿನ್ಯಾಸ ಚೌಕ ಅಥವಾ ದೀರ್ಘ ಚತುರಸ್ರಾಕಾರವಾಗಿದ್ದುದು ಕ್ರಮವಾಗಿ ಗೋಡೆಗಳು ಸರಳವಾಗಿ ನೇರವಾಗಿಲ್ಲದೆ ಕೋಚುಕೋಚಾಗಿ ಉಬ್ಬಿದುವು. ಅವುಗಳ ಮೇಲೆ ಅರೆಗಂಬಗಳೂ ಅವುಗಳ ನಡುವೆ ಮೂರ್ತಿಶಿಲ್ಪಗಳೂ ಕಾಣಿಸಿಕೊಂಡವು. ಮುಂದೆ ಈ ಶೈಲಿ ಹೊಯ್ಸಳರ ಕಾಲದಲ್ಲಿ ಹೆಚ್ಚು ಶ್ರೀಮಂತಗೊಂಡಿತು. ವಿಶಿಷ್ಟವೂ ಸಂಕೀರ್ಣವೂ ಆದ ವಿನ್ಯಾಸ ಇನ್ನೂ ಪ್ರೌಢವಾಯಿತು. ಎತ್ತರವಾದ ಜಗತಿಯ ಮೇಲೆ ನಿರ್ಮಿಸಿರುವ ಈ ದೇವಾಲಯಗಳ ತಲವಿನ್ಯಾಸ ಕಚ್ಚುಕಚ್ಚಾಗಿ ಉಬ್ಬಿದ ಆಯಾಕಾರದ ಗೋಡೆಗಳಿಂದ ಕೂಡಿರಬಹುದು. ಅಷ್ಟ ಭದ್ರಾಕಾರದಲ್ಲಿರಬಹುದು, ಅಷ್ಟಭದ್ರ ಮತ್ತು ಅಷ್ಟಕೋನ ನಕ್ಷತ್ರಗಳ ಸಮ್ಮಿಶ್ರವಾಗಿರಬಹುದು ಅಥವಾ 16 ಮೂಲೆಗಳ ನಕ್ಷತ್ರಾಕಾರವಾಗಿರಬಹುದು. ಯಾವ ವಿನ್ಯಾಸದಲ್ಲಿಯೇ ಇರಲಿ ಜಗತಿ ಅದೇ ತಲವಿನ್ಯಾಸವನ್ನೇ ಅನುಸರಿಸಿರುತ್ತದೆ. ಈ ದೇವಾಲಯಗಳು ಅಡಿಯಿಂದ ಮುಡಿಯವರೆಗೆ ಕುಸುರಿಕೆಲಸದಿಂದ ತುಂಬಿರುವುದು ಒಂದು ವೈಶಿಷ್ಟ್ಯ. ಜಗತಿಯ ಮೇಲಿನ ತಳಹದಿ ಹದಿನಾರು ಅಡ್ಡಪಟ್ಟಿಕೆಗಳಾಗಿ ವಿಂಗಡಗೊಂಡು ಒಂದೊಂದು ಪಟ್ಟಿಕೆಯಲ್ಲಿಯೂ ಆನೆಸಾಲು, ಕುದುರೆಸಾಲು, ಸಿಂಹಸಾಲು, ಸಾಲುಹಂಸ, ಬಳ್ಳಿಸುರುಳಿ, ರಾಮಾಯಣ, ಭಾರತ, ಭಾಗವತಗಳ ಸಾಲುಶಿಲ್ಪ ನವುರಾಗಿ ಕೆತ್ತನೆಗೊಂಡಿರುತ್ತದೆ. ಗೋಡೆಗಳ ಮೇಲೆ ದೇವಾನುದೇವತೆಗಳ, ಅವರ ಪರಿವಾರ ವರ್ಗದ ಮೂರ್ತಿಗಳ ವಿವಿಧ ಭಂಗಿಗಳ ಸಾಲು ತುಂಬಿರುತ್ತವೆ. ತಲವಿನ್ಯಾಸವನ್ನೇ ಅನುಸರಿಸಿ ಮೇಲೆದ್ದ ಶಿಖರಗಳು ಸರ್ವಾಲಂಕೃತವಾಗಿರುತ್ತವೆ. ಈ ದೇವಾಲಯಗಳಲ್ಲಿ ಒಂದು ಗರ್ಭಗೃಹ, ಅದರ ಮುಂದೆ ಸುಕನಾಸಿ ಮತ್ತು ನವರಂಗಗಳು, ನವರಂಗದ ಮುಂದೆ ಒಂದಂಕಣದ ಮುಖಭದ್ರ ಇರುವುದುಂಟು. ಇದೇ ರೀತಿಯ ದೇವಾಲಯಗಳನ್ನು ಜೊತೆಜೊತೆಯಾಗಿ ಒಂದರ ಪಕ್ಕ ಒಂದು ಕಟ್ಟುವುದೂ ಇಂಥ ಎರಡು ದೇವಾಲಯಗಳನ್ನೂ ಒಂದೇ ಹಜಾರದಿಂದ ಕೂಡಿಸುವುದೂ ಉಂಟು. ನವರಂಗದ ಮೂರು ಕಡೆ ಮೂರು ಗರ್ಭಗೃಹಗಳಿದ್ದು ನಾಲ್ಕನೆಯ ಕಡೆ ಮುಖಭದ್ರ ಪ್ರವೇಶದ್ವಾರಗಳಿರುವ ತ್ರಿಕೂಟಾ ಚಲಗಳು ಈ ಶೈಲಿಯಲ್ಲಿ ಕಂಡುಬರುವುದು ಸಾಮಾನ್ಯ. ನಾಲ್ಕು ಅಥವಾ ಐದು ಗರ್ಭಗೃಹಗಳ ಸಾಲಿದ್ದು ಅವನ್ನು ಒಂದೇ ಹಜಾರದಿಂದ ಕೂಡಿಸುವ ಅಪರೂಪ ರೀತಿಯೂ ಉಂಟು. ಬೇಲೂರು, ಹಳೇಬೀಡು, ಸೋಮನಾಥಪುರಗಳ ದೇವಾಲಯಗಳು ಈ ಶೈಲಿಗೆ ಮಾದರಿಗಳು.
ವಿಜಯನಗರದ ಅರಸರ ಕಾಲದಲ್ಲಿ ಕರ್ನಾಟಕದಲ್ಲಿ ದ್ರಾವಿಡ ಶೈಲಿಯ ದೇವಾಲಯಗಳ ನಿರ್ಮಾಣ ಪುನ: ಪ್ರಾರಂಭವಾಯಿತು. ಅದರೆ ಈ ದೇವಾಲಯಗಳಲ್ಲಿ ಚಾಳುಕ್ಯ ಹೊಯ್ಸಳ ದೇವಾಲಯಗಳಂತೆ ಮೂರ್ತಿಶಿಲ್ಪಗಳ ಅಲಂಕರಣ ತುಂಬಿತು. ಮೂರ್ತಿಗಳಲ್ಲಿ ಹೆಚ್ಚು ನಯನಾಜೂಕುಗಳಿಲ್ಲದಿದ್ದರೂ ಕೆಚ್ಚು ಕಸುವುಗಳೂ ಲವಲವಿಕೆಯೂ ಕಂಡುಬರುತ್ತದೆ. ಈ ಕಾಲದ ದೇವಾಲಯಗಳಲ್ಲಿನ ಕಂಬಗಳು ಸಂಕೀರ್ಣ ರೀತಿಯಲ್ಲಿ ವಿಕಾಸಗೊಂಡಿವೆ. ಸಾಲುಗಂಬಗಳಿಗೆ ಸೇರಿದಂತೆ ಕುದುರೆಯಾಳಿಗಳ ಬೃಹತ್ ಶಿಲ್ಪಗಳನ್ನು ಹಿಂಗಾಲಿನ ಮೇಲೆ ಚಿಮ್ಮಿ ನಿಂತಂತೆ ಬಿಡಿಸುವುದು, ನಡುವಣ ದಪ್ಪ ಕಂಬದ ಸುತ್ತಲೂ ತೆಳುವಾದ ಕಿರುಗಂಬಗಳನ್ನು ಜೋಡಿಸುವುದು, ದೊಡ್ಡದಾದ ಬಾಗುಲೋವೆಗೆ ಕಲ್ಲಿನ ಬಳೆಗಳನ್ನು ತೂಗುಬಿಡುವುದು ಇವುಗಳ ವೈಶಿಷ್ಟ್ಯ. ಅನೇಕ ಕಂಬಗಳ ಮೇಲೆ ನಿಂತ ವಿಶಾಲ ಹಜಾರಗಳು ಮಂಟಪಗಳಂತೆ ತೆರೆದಿದ್ದು, ಗಾಳಿ ಬೆಳಕು ಧಾರಾಳವಾಗಿ ಒಳವುಗುವಂತಿರುತ್ತವೆ. ಸಾಲುಗಂಬಗಳಲ್ಲಿ ಬಿಡಿಸಿರುವ ಪ್ರಾಣಿ ಪಕ್ಷಿಗಳು ಬಳ್ಳಿಸುರುಳಿಗಳು ದೇವಾನುದೇವತೆಗಳ ತೆಳುವುಬ್ಬುವ ಮೂರ್ತಿಗಳು ನೃತ್ಯಭಂಗಿಗಳು ದೇವಾಲಯಗಳ ಸೌಂದರ್ಯವನ್ನು ಶ್ರೀಮಂತಗೊಳಿಸಿವೆ. ಹಂಪೆಯಲ್ಲಿನ ವಿಜಯವಿಟ್ಠಲ ಸ್ವಾಮಿ ದೇವಾಲಯ, ಕೃಷ್ಣರಾಯನಗುಡಿ, ಅಚ್ಯುತರಾಯನಗುಡಿ, ಹಜಾರರಾಮಸ್ವಾಮಿ ದೇವಾಲಯ - ಇವು ಈ ಕಾಲದ ದ್ರಾವಿಡ ರೀತಿಯ ದೊಡ್ಡ ದೇವಾಲಯಗಳಲ್ಲಿ ಕೆಲವು. ಹೊರಗೋಡೆಯ ತುಂಬ ಇರುವ ರಾಮಾಯಣ ಭಾರತ ಭಾಗವತಗಳ ಶಿಲ್ಪಸಾಲುಗಳಿಂದ ಹಜಾರರಾಮಸ್ವಾಮಿ ದೇವಾಲಯ ಆಕರ್ಷಕವಾಗಿದೆ.

ಮಲೆನಾಡಿನಲ್ಲಿ ದೇವಾಲಯಗಳು ವಿಶಿಷ್ಟವಾದ ಶೈಲಿಯಲ್ಲಿ ಬೆಳೆದುವು. ವಿಜಯನಗರದ ಕಾಲದಲ್ಲೇ ನಿರ್ಮಿತವಾದ ಶೃಂಗೇರಿಯ ವಿದ್ಯಾಶಂಕರ ದೇವಾಲಯದಲ್ಲಿ ದ್ರಾವಿಡ, ಹೊಯ್ಸಳ ಮತ್ತು ಇತರ ಶೈಲಿಗಳ ಸಮ್ಮಿಳನವನ್ನು ಕಾಣಬಹುದು. ಎತ್ತರವಾದ ಕಿರುಜಗತಿಯ ಮೇಲೆ ನಿರ್ಮಿತವಾದ ಈ ಕಗ್ಗಲ್ಲ ದೇವಾಲಯದ ಮುಂಭಾಗ ಹಿಂಭಾಗಗಳೆರಡೂ ಅರ್ಧವೃತ್ತಾಕಾರದಲ್ಲಿದ್ದು ಗೋಪುರವೂ ವೃತ್ತಾಕಾರವಾಗಿ ಮೆಟ್ಟಲು ಮೆಟ್ಟಲಾಗಿ ಮೇಲೆದ್ದಿದೆ. ಹೊರಗೋಡೆಗಳ ಮೇಲೆ ಸ್ವಾರಸ್ಯವಾದ ಮೂರ್ತಿ ಶಿಲ್ಪಗಳ ಅಲಂಕರಣವಿದೆ. ಒಳಗಿನ ಕಂಬಗಳು ಸಂಕೀರ್ಣ ರೀತಿಯವು. ಇದೇ ರೀತಿಯಲ್ಲಿ ಕೆಳದಿಯ ನಾಯಕರು ಕೆಳದಿ, ಇಕ್ಕೇರಿ ಮೊದಲಾದ ಕಡೆ ಕಟ್ಟಿಸಿರುವ ದೇವಾಲಯಗಳಲ್ಲಿ ದ್ರಾವಿಡ ಹೊಯ್ಸಳ ಶೈಲಿಗಳೆರಡೂ ಹೊಂದಿಕೊಂಡಿರುವುದಲ್ಲದೆ ಮುಸ್ಲಿಂ ಶೈಲಿಯ ಪ್ರಭಾವವನ್ನೂ ಕಾಣಬಹುದು. ಅಘೋರೇಶ್ವರ ದೇವಾಲಯವನ್ನು ಹೊಯ್ಸಳ ದೇವಾಲಯಗಳಂತೆ ಎತ್ತರವಾದ ಜಗತಿಯ ಮೇಲೆ ಕಟ್ಟಿದ್ದರೂ ಜಗತಿಯ ಅಗಲ ತೀರ ಕಿರಿದು. ಚತುರಸ್ರಾಕಾರದ ಗರ್ಭಗೃಹ, ಸುಕನಾಸಿ, ದೊಡ್ಡದಾದ 25 ಅಂಕಣಗಳ ಮಂಟಪಗಳಿದ್ದು ಗರ್ಭಗುಡಿಯ ಮೇಲಿನ ಕಲ್ಲಿನ ಗೋಪುರ, ನವರಂಗದ ಗುಂಡುಕಂಬಗಳು, ಹೊರಗೋಡೆಯ ಮೇಲೆ ತೆಳುವಾಗಿ ಬಿಡಿಸಿರುವ ಮೂರ್ತಿ ಶಿಲ್ಪ. ತಳಹದಿಯ ಪಟ್ಟಿಕೆಗಳು ಹೊಯ್ಸಳ ರೀತಿಯನ್ನೂ ವಿಶಾಲವಾದ ನವರಂಗ, ಅನೇಕ ರೀತಿಯ ಕಂಬಗಳು ಎರಡು ಸುಕನಾಸಿಗಳು ಮತ್ತು ಕತ್ತಲೆ ಪ್ರದಕ್ಷಿಣೆಗಳು ದ್ರಾವಿಡ ರೀತಿಯ ಕಂಬಗಳು ಎರಡು ಸುಕನಾಸಿಗಳು ಮತ್ತು ಕತ್ತಲೆ ಪ್ರದಕ್ಷಿಣೆಗಳು ದ್ರಾವಿಡ ರೀತಿಯನ್ನೂ ಅನುಕರಿಸಿರುವುದಲ್ಲದೆ ನಂದಿಮಂಟಪದಲ್ಲಿಯೂ ಇತರೆಡೆಗಳಲ್ಲಿಯೂ ಇರುವ ಕಮಾನುಗಳು ಮುಸ್ಲಿಂ ರೀತಿಯಲ್ಲಿವೆ. ಎತ್ತರವಾದ ತಳಹದಿಯ ಮೇಲೆ ಪುಟ್ಟ ಗರ್ಭಗೃಹ ಸುಕನಾಸಿಗಳಿದ್ದು ಮುಂದೆ ನೆಲದಿಂದ ನೀಳವಾಗಿ ಮೇಲೆದ್ದ ಕಲ್ಲಿನ ಕಂಬಗಳುಳ್ಳ ಮುಖಭದ್ರ ಮಾತ್ರ ಇರುವ ತೀರ ಸಣ್ಣವಾದ ಹಲವಾರು ಗುಡಿಗಳು ಈ ಭಾಗದ ವೈಶಿಷ್ಟ್ಯ. ತೀರ್ಥಹಳ್ಳಿ, ನಗರ, ಸಾಲಗೆರೆ, ಶೃಂಗೇರಿ, ಜಂಬಿಟ್ಟಿಗೆ ಮುಂತಾದ ಕಡಗಳಲ್ಲೆಲ್ಲ ಇಂಥ ಗುಡಿಗಳನ್ನು ಕಾಣಬಹುದು. ಇವುಗಳಲ್ಲಿ ಜಂಬಿಗೆ ದೇವಾಲಯ ಮಾದರಿಯಾಗಿದೆ. ಈ ಪುಟ್ಟ ಗುಡಿಯ ಒಳಗೂ ಹೊರಗೂ ಗೋಡೆಗಳ ಮೇಲೆ ರಾಮಾಯಣ ಭಾರತ ಭಾಗವತ ಕಥೆಗಳೂ ದ್ವಾರಪಾಲಕರು ಅಷ್ಟದಿಕ್ಪಾಲಕರು ದಶಾವತಾರ ಶಿವಲೀಲೆಗಳು ಮತ್ತು ಇತರ ಮೂರ್ತಿಗಳೂ ರೂಪಿತವಾಗಿವೆ. 

ಜಂಬುಕಲ್ಲಿನಲ್ಲಿಯೇ ಕಟ್ಟಿರುವ ದೇವಾಲಯಗಳು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಹೆಚ್ಚು. ವೃತ್ತಾಕಾರದ ವಿನ್ಯಾಸದ ಕೆಲವು ದೇವಾಲಯಗಳಿದ್ದರೂ ಬೌದ್ಧ ವಾಸ್ತುವನ್ನನುಕರಿಸುವ ಚೈತ್ಯಾಕಾರದ ದೇವಾಲಯಗಳು ಹೆಚ್ಚಾಗಿ ಕಂಡುಬರುತ್ತವೆ. ಇವುಗಳಲ್ಲಿ ಉದ್ಯಾವನದ ಚಂಬುಕಲ್ ದೇವಸ್ಥಾನ, ಉಡುಪಿಯ ಅನಂತೇಶ್ವರ ದೇವಸ್ಥಾನ, ಮೂಡಬಿದರೆಯ ದುರ್ಗಾದೇವಾಲಯ ಬ್ರಹ್ಮಾವರದ ಮಹೇಶ್ವರ ದೇವಾಲಯ ಮುಂತಾದವು ಪ್ರಸಿದ್ಧವಾದುವು. ಈ ದೇವಾಲಯಗಳ ಹಿಂಭಾಗ ಅರ್ಧವೃತ್ತಾಕಾರ, ಇವುಗಳ ಮೇಲ್ಛಾವಣಿಗಳು ನೇಪಾಳದ ತರಾಯಿಗಳಂತೆ ಎರಡು, ಮೂರು ಅಂತಸ್ತುಗಳನ್ನು ಹೊಂದಿದ್ದು ಹೆಚ್ಚು ಇಳಿಜಾರಾಗಿವೆ. ಸಾಮಾನ್ಯವಾಗಿ ಇವುಗಳಿಗೆ ತಾಮ್ರದ ತಗಡನ್ನು ಹೊದ್ದಿಸಿರುತ್ತದೆ. ಈ ಎಲ್ಲ ವಿಷಯಗಳಲ್ಲಿಯೂ ಇಲ್ಲಿನ ದೇವಾಲಯಗಳು ಕೇರಳಶೈಲಿಯ ಅನುಕರಣೆಗಳು. 

ಕೊಡಗಿನಲ್ಲಿರುವ ಓಂಕಾರೇಶ್ವರ ದೇವಾಲಯ, ಕೊಡಗಿನ ರಾಜರ ಸಮಾಧಿ ದೇವಾಲಯಗಳು ಸಂಪೂರ್ಣವಾಗಿ ಮುಸ್ಲಿಂ ಶೈಲಿಯಲ್ಲಿದ್ದು ಚೌಕವಿನ್ಯಾಸದ ಗುಮ್ಮಟಗಳನ್ನು ಹೋಲುತ್ತವೆ. ಅವುಗಳಲ್ಲಿರುವ ಮೂರ್ತಿಶಿಲ್ಪಗಳು, ಒಳಗಿನ ಗರ್ಭಗುಡಿ. ದ್ವಾರಪಾಲಕರು ಮೊದಲಾದವುಗಳಿಂದ ಮಾತ್ರ ಅವನ್ನು ಹಿಂದೂ ದೇವಾಲಯವೆಂದು ಹೇಳಬೇಕು.  			
(ನೋಡಿ- ಇಸ್ಲಾಮೀ-ವಾಸ್ತುಶಿಲ್ಪ,-ಕಲೆ)
(ನೋಡಿ- ಚರ್ಚ್)
  (ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ